ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವು ಅಂಗಡಿಗಳಿಗೆ ತೆರಳಿದ ತಂಡವೊಂದು 50 ಸಾವಿರ ಹಣ ಕೇಳಿ ಸಿಕ್ಕಿ ಬಿದ್ದಿದ್ದು, ಓರ್ವ ಹ್ಯೂಮನ್ ರೈಟ್ಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತನನ್ನು ದೀಪಕ್ ರಾಜೇಶ್ ಕುವೆಲ್ಲೋ(೪೫) ಎಂದು ಗುರುತಿಸಲಾಗಿದೆ. ಮೂವರು ಯುವಕರ ತಂಡವೊಂದು ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ ಬಿಲ್ಡಿಂಗಿನ ಸಾಗರ್ ಕಲೆಕ್ಷನ್ ಅಂಗಡಿಗೆ ನುಗ್ಗಿ ನಾವು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಲಾಕ್‌ಡೌನ್ ವೇಳೆ ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, ನಿಮ್ಮ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆಂದು ಬೆದರಿಸಿದಲ್ಲದೆ ೫೦ ಸಾವಿರ ದಂಡ ಕಟ್ಟುವಂತೆ ಹೇಳಿದ್ದಾರೆ. ಇದೇ ವೇಳೆ ಅಂಗಡಿ ಮಾಲಕ ಅಬ್ದುಲ್ ರೆಹಮಾನ್ ಅವರು ಅಷ್ಟು ಹಣ ನಮ್ಮಲ್ಲಿ ಇಲ್ಲ ನಾವು ಕೆಲಸದವರಿಗೆ ಸಂಬಳ ನೀಡುವುದಕ್ಕಾಗಿ ಅಂಗಡಿ ತೆರೆದಿದ್ದೇವೆ ಕೆಲವು ಚೆಕ್ ಕ್ಲಿಯರೆನ್ಸ್ ಬಾಕಿ ಇತ್ತು ಹಾಗಾಗಿ ಅದನ್ನು ಕ್ಲಿಯರೆನ್ಸ್ ಮಾಡುತ್ತಿದ್ದೆವೆ ಎಂದಿದ್ದಾರೆ. ಆದರೆ ಅಧಿಕಾರಿಗಳ ಹೆಸರಿನಲ್ಲಿ ಬಂದಿದ್ದ ತಂಡ ಹಣ ಕೊಡುವಂತೆ ಹಠ ಹಿಡಿದಿದೆ. ಕೊನೆಗೆ ಹತ್ತು ಸಾವಿರ ಹಣ ಕೊಡಿ ಎಂದು ಬಿಲ್ ಬರೆಯಲು ಮುಂದಾಗಿದ್ದಾರೆ. ಆಗ ಅವರ ಬಳಿ ಮಹಾನಗರ ಪಾಲಿಕೆಯ ರಶೀದಿ ಇಲ್ಲದಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ಸಂಶಯಗೊಂಡು ತಕ್ಷಣ ಬಂದರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಪೊಲೀಸರು ಆಗಮಿಸಿ ಅಲ್ಲಿದ್ದ ದೀಪಕ್ ರಾಜೇಶ್ ಕುವೆಲ್ಲೋನನ್ನು ಬಂಧಿಸಿದ್ದಾರೆ. ಅದರೆ ಆತನ ಜೊತೆಗಿದ್ದ ತೌಫಿಕ್ ಕಲಂದರ್ ಮತ್ತು ರಿಯಾಜ್ ಎಂಬವರು ಪೊಲಿಸರನ್ನು ನೋಡಿ ಪರಾರಿಯಾಗಿದ್ದಾರೆ.
ದೀಪಕ್ ರಾಜೇಶ್ ಕುವೆಲ್ಲೋ ಪೆರ್ಮನ್ನೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಆಧುನಿಕ ಹ್ಯೂಮನ್ ರೈಟ್ಸ್ ಎನ್ನುವ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೇ ವೇಳೆ ಲಾಕ್‌ಡೌನ್ ವೇಳೆ ಅಂಗಡಿ ತೆರೆದಿದ್ದಾಕ್ಕಾಗಿ ಅಂಗಡಿಯ ವಿರುದ್ಧವು ಕೇಸು ದಾಖಲಾಗಿದೆ.