ಮಂಡ್ಯ : ಕೊರೊನಾ ಸಿಕ್ಕಸಿಕ್ಕವರನ್ನೆಲ್ಲಾ ಬಲಿ ಪಡೆಯುತ್ತಲೇ ಇದೆ. ಅದರ ಕಬಂಧಬಾಹುಗಳಿಗೆ ಹಲವರು ಬಲಿಯಾಗುತ್ತಿದ್ದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹದ್ದೇ ಮತ್ತೊಂದು ದುರಂತ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಅವರಿಗೆ ಹೆರಿಗೆ ಆಗಿ 4 ದಿನ ಆಗಿತ್ತಷ್ಟೆ. 5ನೇ ದಿನಕ್ಕೆ ಮಹಾಮಾರಿ ಕೊರೋನಾಗೆ ಬಾಣಂತಿ ಶಿಲ್ಪಶ್ರೀ ಬಲಿಯಾಗಿದ್ದು, ಏನೂ ಅರಿಯದ ಕಂದ ತಾಯಿ ಇಲ್ಲದೆ ತಬ್ಬಲಿಯಾಗಿದೆ.
ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರಾಗಿದ್ದರು. ದಂಪತಿ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಜನಿಸಿರುವ 3ನೇ ಮಗು ಗಂಡು. ಗರ್ಭಿಣಿಯಾಗಿದ್ದ ಶಿಲ್ಪಶ್ರೀಗೆ ಹತ್ತು ದಿನದ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಅವರನ್ನು ಮಂಡ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಲ್ಪಶ್ರೀ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ತೆಗೆದಿದ್ದರು. ಮಗುವಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಶಿಲ್ಪಶ್ರೀ ನಿನ್ನೆ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.