ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಈ ನಿರ್ಧಾರದಿಂದ ಸಂತೋಷಗೊಂಡಿರುವ ವಿದ್ಯಾರ್ಥಿಗಳ ತಂಡವೊಂದು ಕಾಲೇಜಿನ ಬಳಿ ತೆರಳಿ ಬೂದುಗುಂಬಳ ಕಾಯಿ ಒಡೆದು ಸಂಭ್ರಮಾಚರಣೆ ನಡೆಸಿದ ಘಟನೆ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 10ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ದ್ವಿತೀಯ ಪಿಯುಸಿಯ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಸರ್ಕಾರದ ನಿರ್ಧಾರ ಪ್ರಕಟವಾದಂದು ಲಾಕ್‌ಡೌನ್ ಇದ್ದ ಕಾರಣ ಯಾರೂ ಹೊರಗೆ ಬರದಂತಾಗಿತ್ತು. ನಿನ್ನೆ ಲಾಕ್‌ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಬಳಿ ಬಂದು ಗೇಟ್ ಮುಂದೆ ಬೂದುಗುಂಬಳ ಕಾಯಿ, ತೆಂಗಿನ ಕಾಯಿಯನ್ನು ಒಡೆದು, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
ಸಂಭ್ರಮಾಚರಣೆ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಜಯಕಾರವನ್ನು ಹಾಕಿರುವ ವಿದ್ಯಾರ್ಥಿಗಳು ಕಾಲೇಜಿಗೆ ಗುಡ್ ಬಾಯ್ ಹೇಳಿ ನಮಸ್ಕರಿಸಿದ್ದಾರೆ. ಇದೆಲ್ಲವನ್ನು ವೀಡಿಯೋ ಮಾಡಿರುವ ವಿದ್ಯಾರ್ಥಿಗಳು ಅದಕ್ಕೆ ಹಾಡನ್ನು ರಿಮೇಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಸಂಭ್ರಮಾಚರಣೆ ವೈರಲ್ ಆಗುತ್ತಿದೆ.