ಸುಳ್ಯ: ಕೋವಿಡ್ ಸೋಂಕಿತನೋರ್ವ ತನ್ನನ್ನು ವಿಚಾರಿಸಲು ಬಂದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಧಮ್ಕಿ ಹಾಕಿದ್ದು, ಜೀವ ಬೆದರಿಕೆ ಒಡ್ಡಿದ ಘಟನೆ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನಡೆದಿದೆ.
ದೇವಚಳ್ಳ ಗ್ರಾ.ಪಂ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಸೊಂಕಿತರನನ್ನು ಪಂಜ ಕೋವಿಡ್ ಸೆಂಟರ್ ಗೆ ಸೇರಿಸಲಾಗಿದೆ. ಕೆಲವರನ್ನು ಹೋಂ ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಈ ಪೈಕಿ ಕಂದ್ರಪ್ಪಾಡಿಯ ಸೋಂಕಿತನೋರ್ವ ಹೋಂ ಐಸೋಲೇಶನ್ ನಿಂದ ಹೊರಗಿದ್ದು, ಊರಿಡೀ ಸುತ್ತಾಡಿಕೊಂಡಿದ್ದ ಬಗ್ಗೆ ಸಾರ್ವಜನಿಕರು ಪಂಚಾಯತ್ ಗೆ ದೂರು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೋಂಕಿತ ವ್ಯಕ್ತಿಯ ಮನೆಗೆ ಪಿಡಿಒ ಮತ್ತು ತಂಡ ತೆರಳಿದ್ದಾಗ, ಆತ ಮನೆಯಲ್ಲಿ ಇರಲಿಲ್ಲವೆಂದೂ, ಇನ್ನೊಂದು ಕಡೆ ಇದ್ದ ಆತನನ್ನು ಮನವೊಲಿಸಿ ಪಂಜದ ಕೋವಿಡ್ ಸೆಂಟರ್ ಗೆ ಸೇರಿಸಲಾಯಿತೆಂದೂ ತಿಳಿದುಬಂದಿದೆ. ಬಳಿಕ ಬುಧವಾರ ಮುಂಜಾನೆ ಪಿಡಿಒ ಪಂಜದ ಕೋವಿಡ್ ಸೆಂಟರ್ ಗೆ ತೆರಳಿ ಆರೋಗ್ಯ ವಿಚಾರಿಸುವ ವೇಳೆ ಕಂದ್ರಪ್ಪಾಡಿಯ ಸೋಂಕಿತ ವ್ಯಕ್ತಿ ‘ ನಿಮ್ಮಿಂದಾಗಿ ನನ್ನ ಲಕ್ಷ ವ್ಯವಹಾರಗಳಿಗೆ ತೊಂದರೆಯಾಗಿದ್ದು, ಆಚೆ ಬಂದ ಬಳಿಕ ನೋಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಒಡ್ಡಿರುವುದಾಗಿ ಪಿಡಿಒ ಸುಳ್ಯ ತಹಶಿಲ್ದಾರರಿಗೆ ದೂರಿತ್ತಿದ್ದಾರೆ. ಈ ಕುರಿತು ಸುಬ್ರಹ್ಮಣ್ಯ ಠಾಣೆ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಆರೋಪಿಯ ವಿರುದ್ದ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ.