ಲಕ್ನೋ : ಬಿಜೆಪಿಗೆ ಆಸ್ತಿ ಡೀಲರ್ ಮತ್ತು ಭ್ರಷ್ಟಾಚಾರಿಗಳ ಮೇಲೆ ನಂಬಿಕೆ ಇದೆಯೆ ಹೊರತು ರಾಮನ ಮೇಲೆ ಅಲ್ಲ ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ತಾನು ನ್ಯಾಯಾಲಯದ ಕದ ತಟ್ಟುತ್ತಿರುವುದಾಗಿ ಅವರು ಬುಧವಾರ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ರಾಮ ಜನ್ಮಭೂಮಿ ಟ್ರಸ್ಟ್ ಭೂ ಹಗರಣ ನಡೆಸುತ್ತಿದೆ ಎಂದು ಆರೋಪಿಸಿದ್ದರು. 2 ಕೋಟಿ ರೂ. ಗೆ ಒಂದು ಜಮೀನು ಖರೀದಿ ಮಾಡಿ, ಕೇವಲ 5 ನಿಮಿಷಗಳ ಅಂತರದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್‍ಸಿಂಗ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಪ್ರಕರಣದ ಬಗ್ಗೆ ಇಂದು ಮಾತನಾಡಿದ ಸಂಜಯ್ ಸಿಂಗ್, “ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಹಗರಣವನ್ನು ಬಹಿರಂಗಪಡಿಸಿದ ನಂತರ ಅದರ ವಿರುದ್ದ ಕ್ರಮ ಕೈಗೊಳ್ಳಲು ಭಾರತ ಸರ್ಕಾರಕ್ಕೆ ಮತ್ತು ಬಿಜೆಪಿಗೆ ಮೂರು ದಿನಗಳನ್ನು ನೀಡಿ ಕಾಯುತ್ತಿದ್ದೆ. ಆದರೆ ಬಿಜೆಪಿಗೆ ಆಸ್ತಿ ಡೀಲರ್ ಮತ್ತು ಭ್ರಷ್ಟಾಚಾರಿಗಳ ಮೇಲೆ ನಂಬಿಕೆಯಿದೆಯೆ ಹೊರತು ರಾಮನ ಮೇಲೆ ಅಲ್ಲ ಎಂದು ನನಗೆ ತಿಳಿಯಿತು. ಇದೀಗ ಪ್ರಕರಣದ ಬಗ್ಗೆ ನ್ಯಾಯಾಲಯವನ್ನು ಸಂಪರ್ಕಿಸಲು ತಯಾರಿ ನಡೆಸುತ್ತಿದ್ದೇನೆ” ಎಂದು ಹೇಳಿದ್ದಾರೆ.