Ad Widget .

ಮುಖ್ಯಮಂತ್ರಿ ಬದಲಾವಣೆ | ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ | 30 ಶಾಸಕರ ಪ್ರತ್ಯೇಕ ಭೇಟಿ | ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದೇನು…? | ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಕೋವಿಡ್ ಸಂಬಂಧ ನಾನು ಇಲ್ಲಿ ಚರ್ಚೆ ಮಾಡಲಿದ್ದೇನೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿಯ ಉಸ್ತುವಾರಿಯೂ ಆಗಿರುವ ಅರುಣ್ ಸಿಂಗ್ ಜೂನ್ 16ರಂದು ತಿಳಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಿರುವ ಉದ್ದೇಶವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

Ad Widget . Ad Widget .

ರಾಜ್ಯ ಸರ್ಕಾರ ಎರಡು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಆ ಮೂಲಕ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗಿದೆ. 1250 ಕೋಟಿ ರೂಪಾಯಿ ಮತ್ತು 500 ಕೋಟಿ ರೂಪಾಯಿಗಳ ಎರಡು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅಲ್ಲದೆ, ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಡವರಿಗೆ ತಲಾ ಒಂದು ಲಕ್ಷ ನೀಡಲು 300 ಕೋಟಿ ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಇವೆಲ್ಲವೂ ಉತ್ತಮ ಕ್ರಮಗಳಾಗಿವೆ ಎಂದವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಉತ್ತಮ ರೀತಿಯಿಂದ ಕೆಲಸ ಮಾಡಿದೆ. ಯಡಿಯೂರಪ್ಪ ಕೂಡ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಜೆಡಿಎಸ್ ಪಕ್ಷ ಕ್ವಾರಂಟೈನ್‌ನಲ್ಲಿ ಇದ್ದರೆ, ಇತ್ತ ಕಾಂಗ್ರೆಸ್ ಪಕ್ಷ ಕೇವಲ ಕಚ್ಚಾಟದಲ್ಲಿ ತೊಡಗಿಕೊಂಡಿದೆ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷವು ‘ಸೇವಾ ಹೀ ಸಂಘಟನ್’ ಮೂಲಕ ಅತ್ಯುತ್ತಮ ಕಾರ್ಯನಿರ್ವಹಿಸಿದೆ ಎಂದು ಅರುಣ್ ಸಿಂಗ್ ವಿವರಿಸಿದ್ಧಾರೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದರು. ಆ ಮೂಲಕ, ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Ad Widget . Ad Widget .

ಇದಕ್ಕೂ ಮೊದಲು, ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಸೂಕ್ತ ರೀತಿಯಲ್ಲಿ ಕೆಲಸ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಜನಸೇವೆ ಮಾಡಿಲ್ಲ. ಜನರು ಅದನ್ನು ಗಮನಿಸುತ್ತಾರೆ ಎಂದು ಹೇಳಿದ್ದರು. ಸೇವೆಯೇ ಸಂಘಟನೆ ಎಂಬಂತೆ ಕೆಲಸಗಳು ಆಗುತ್ತಿವೆ. ಗಿಡ ನೆಡುವ ಕಾರ್ಯಕ್ರಮ, ಯೋಗ ದಿನದ ಸಿದ್ಧತೆಗಳೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಯಾರೇ ಆಗಲಿ ಪಕ್ಷಕ್ಕೆ ಧಕ್ಕೆ ತರುವ ಹೇಳಿಕೆ ನೀಡಬಾರದು. ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದೇವೆ. ಶಾಸಕ ಯತ್ನಾಳ್ ವಿರುದ್ಧ ಎರಡು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ ಎಂದೂ ಅರುಣ್ ಸಿಂಗ್ ತಿಳಿಸಿದ್ದಾರೆ.

ಕೇವಲ ಜಾಹೀರಾತು ಕೊಟ್ರೆ ದುಡ್ಡು ಹಾಳಾಗುತ್ತದೆ ಅಷ್ಟೇ. ಜಿಲ್ಲಾ ಉಸ್ತುವಾರಿ ಸಚಿವರು ನಿಮ್ಮ ನಿಮ್ಮ ಜಿಲ್ಲೆಗೆ ಹೋಗಿ ಅಲ್ಲಿ ವಾಸ್ತವ್ಯ ಮಾಡಿ, ಆಗ ಪಕ್ಷದವರ ಸಂಪರ್ಕ ಆಗುತ್ತೆ. ಬಿಜೆಪಿ ಆಡಳಿತದ ಇತರೆ ರಾಜ್ಯಗಳ ಕೆಲಸ ಹೋಲಿಕೆ ಮಾಡಿ. ನಿಮ್ಮ ಇಲಾಖೆಗಳಲ್ಲಿ ಆದ ಕೆಲಸ ಹೋಲಿಕೆ ಮಾಡಿ ನೋಡಿ ಎಂದು ಸಭೆಯಲ್ಲಿ ಸಚಿವರಿಗೆ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಾಯಕತ್ವ ಬದಲಾವಣೆ ಚರ್ಚೆಯೇ ಆಗಿಲ್ಲ: ನಳಿನ್ ಕುಮಾರ್ ಕಟೀಲ್

ಸಭೆಯಲ್ಲಿ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ. ಆ ಪ್ರಶ್ನೆಯೇ ಉದ್ಭವಿಸಲ್ಲ. ಯಾವುದೇ ಬದಲಾವಣೆ ಇಲ್ಲ ಎಂದು ಸಭೆ ಬಳಿಕ ನಳಿನ್ ಕುಮಾರ್ ಕಟೀಲ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಮ್ಮುಖದಲ್ಲಿ ಸಚಿವರ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿ ಸರ್ಕಾರ ಸಮರ್ಥವಾಗಿ ಕೆಲಸ ಮಾಡ್ತಿದೆ. ಪ್ರತಿ ಗುರುವಾರ ಸಚಿವರು ಕಚೇರಿಗಳಲ್ಲಿ ಇರಬೇಕು. ರಾಜ್ಯ ಸರ್ಕಾರದ ಯೋಜನೆಗಳಿಗೆ ಪ್ರಚಾರ ಸಿಕ್ಕಿಲ್ಲ. ಹೆಚ್ಚು ಜನಪರ ಯೋಜನೆ ಸರ್ಕಾರ ಜಾರಿಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕಟೀಲ್ ಹೇಳಿದ್ದಾರೆ.

30 ಶಾಸಕರ ಪ್ರತ್ಯೇಕ ಭೇಟಿ?
ಸಿಎಂ, ಸಚಿವರ ಜೊತೆಗೆ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸಿದ್ದಾರೆ. ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಅರುಣ್ ಕುಮಾರ್ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ಸಚಿವರು ಸೇರಿ,9 ಸಚಿವರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಉಳಿದಂತೆ ಯಾವುದೇ ಸಚಿವರೂ ಮಾತನಾಡಿಲ್ಲ. ಸಭೆಗೆ ತಡವಾಗಿ ಬಂದ ಯೋಗೇಶ್ವರ್ ಸಹ ಮಾತಾಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ನಾಳೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಅರುಣ್ ಸಿಂಗ್‌ರನ್ನು, ಸಿ.ಪಿ. ಯೋಗೇಶ್ವರ್ ಪ್ರತ್ಯೇಕವಾಗಿ ಭೇಟಿಯಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಅರುಣ್ ಸಿಂಗ್ ಜೊತೆ ಸಚಿವ ಯೋಗೇಶ್ವರ್ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಅರುಣ್ ಸಿಂಗ್ ಭೇಟಿಗೆ 30ಕ್ಕೂ ಹೆಚ್ಚು ಬಿಜೆಪಿ ಶಾಸಕರು ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಬೆಳಗ್ಗೆ 9ಗಂಟೆಗೆ ಶಾಸಕರ ಭೇಟಿ ಆರಂಭವಾಗಲಿದೆ. ಕುಮಾರಕೃಪಾ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಭೇಟಿ ನಡೆಯಲಿದೆ.

Leave a Comment

Your email address will not be published. Required fields are marked *