ಸುಬ್ರಹ್ಮಣ್ಯ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಾದ ಕಾರಣ ಭಕ್ತರು ತೀರ್ಥಯಾತ್ರೆ ಆರಂಭಿಸಿದ್ದು, ಕುಕ್ಕೆಗೆ ಭಕ್ತರ ದಂಡು ಹರಿದುಬರುತ್ತಿದೆ. ಸುಬ್ರಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಹೆರಲಾಗಿದ್ದು, ಆಗಮಿಸಿದ ಭಕ್ತರಿಗೆ ದಂಡ ವಿಧಿಸಲಾಗುತ್ತಿದೆ.
ಜೂ.14 ರಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ದ.ಕ. ಸೇರಿದಂತೆ ಉಳಿದ 11 ಜಿಲ್ಲೆಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಜೂ. 21 ರವರೆಗೆ ಮುಂದುವರೆಸಲಾಗಿದೆ. ಇನ್ನು ಜಿಲ್ಲೆಯಲ್ಲಿ ದಿನಕ್ಕೆ 50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದ ಗ್ರಾಮಪಂಚಾಯಿತ್ ಗಳನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದ್ದೇಶಿಸಿದ್ದರು. ಇದರಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಕೂಡ ಒಳಗೊಂಡಿದೆ.
ಇನ್ನು ಇದಾವುದರ ಅರಿವಿರದೆ ರಾಜ್ಯದ ಮೂಲೆ ಮೂಲೆಗಳಿಂದ ಕುಕ್ಕೆ ಕ್ಷೇತ್ರಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಜಿಲ್ಲಾಡಳಿತದ ಕಠಿಣ ಆದೇಶ ಪಾಲಿಸುತ್ತಿರುವ ಸುಬ್ರಹ್ಮಣ್ಯ ಪೊಲೀಸರು ಆಗಮಿಸುತ್ತಿರುವ ಭಕ್ತರಿಗೆ ದಂಡ ವಿಧಿಸಿ, ಪ್ರಕರಣ ಧಾಖಲಿಸಿಕೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ. ಹಲವು ಕಡೆ ತಪಾಸಣೆ ನಡೆಸುತ್ತಿದ್ದರು, ಅವುಗಳನ್ನು ತಪ್ಪಿಸಿ ಕಳ್ಳಮಾರ್ಗಗಳ ಮೂಲಕ ಭಕ್ತರು ಕುಕ್ಕೆಗೆ ತಲುಪುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.