ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಮರವೂರು ಸೇತುವೆ ಮಂಗಳವಾರ ಮುಂಜಾನೆ ಕುಸಿತಗೊಂಡಿದ್ದು, ಸಂಚಾರ ನಿರ್ಬಂಧಿಸಲಾಗಿದೆ.

ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಬಜಪೆಯಿಂದ ಮಂಗಳೂರು ಕಡೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ.

ಬಿರುಕು ತುಂಬಾ ಆಳ ಮತ್ತು ಅಗಲವಾಗಿದ್ದು, ಯಾವುದೇ ಸಮಯದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯಿದೆ. ಗುರುಪುರ ನದಿಯಲ್ಲಿರುವ ಸೇತುವೆಯ ಕೆಳಗೆ ನಡೆಯುತ್ತಿರುವ ಮರಳು ಗಣಿಗಾರಿಕೆಯು ಬಿರುಕಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಏರ್ಪೋರ್ಟ್ ಗೆ ಹಾಗೂ ಬಜಪೆ- ಕಟೀಲು ಮಾರ್ಗದಲ್ಲಿ ಸಂಚರಿಸುವವರು ಕೂಳೂರು- ಕೆ ಬಿ ಎಸ್ ಜೋಕಟ್ಟೆ- ಪೋರ್ಕೊಡಿ- ಬಜಪೆ. ಅಥವಾ ಪಚ್ಚನಾಡಿ, ವಾಮಂಜೂರ್- ಗುರುಪುರ ಕೈಕಂಬ- ಬಜಪೆ ಮಾರ್ಗವಾಗಿ ಸಂಚರಿಸಬಹುದು.