ಬೆಂಗಳೂರು: ಲಾಕ್ಡೌನ್ ತೆರವಾದ ಬಳಿಕ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಿ ಪ್ರಸಕ್ತ ವರ್ಷದ ಶೈಕ್ಷಣಿಕ ಕೆಲಸವನ್ನು ಪ್ರಾರಂಭಿಸಲು ಶಿಕ್ಷಕರಿಗೆ ಅವಕಾಶ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜುಲೈ 1 ರಿಂದಲೇ 2021-22 ಸಾಲಿನ ಶಾಲಾ ತರಗತಿ ಆರಂಭವಾಗಲಿದೆ. ನಾಳೆ (ಜೂ.15) ರಿಂದಲೇ ಪ್ರಸಕ್ತ ವರ್ಷದ ಶೈಕ್ಷಣಿಕ ಕೆಲಸ ಪ್ರಾರಭಿಸಬೇಕೆಂದು ಇಂದು ಶಿಕ್ಷಣ ಆಯುಕ್ತರು ಆದೇಶಿಸಿದ್ದರು.
ಇನ್ನೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಇರುವುದರಿಂದ ಈ ಬಗ್ಗೆ ಶಿಕ್ಷಕರಲ್ಲಿ ಗೊಂದಲ ಉಂಟಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಸಂಜೆ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಚಿವರು, ಮಂಗಳವಾರದಿಂದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಾಗಿದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಇನ್ನೂ ಜಾರಿಯಲ್ಲಿರುವುದರಿಂದ ಶಿಕ್ಷಕರ ಚಲನವಲನಕ್ಕೆ ತೊಂದರೆಯಾಗಲಿದೆ. ಆಯಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಪೂರ್ಣಗೊಂಡ ನಂತರ ಶಿಕ್ಷಕರು ಶಾಲೆಗಳಿಗೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.