ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಗಣನೀಯವಾಗಿ ಇಳಿಮುಖವಾಗುತ್ತಿದೆ. ಈಗ ಕೇವಲ 2 ರಿಂದ 3 ಸಾವಿರ ಕೋವಿಡ್ ಪ್ರಕರಣಗಳಷ್ಟೇ ಪತ್ತೆಯಾಗುತ್ತಿದೆ. ನಗರದಲ್ಲಿ ಸರ್ಕಾರ ಲಾಕ್‌ಡೌನ್ ಸಡಿಲಿಸಿ ಅನ್‌ಲಾಕ್ ಮಾಡಿದ ಪರಿಣಾಮದಿಂದ ಕೊರೊನಾ ಸೋಂಕಿನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿರು ಕಾರಣ ಕಠಿಣ ನಿಯಮಗಳನ್ನು ಹೊರಡಿಸಲಾಗಿದೆ.
ಬೇರೆ ಬೇರೆ ರಾಜ್ಯಗಳು ಮತ್ತು ಇತರ ಜಿಲ್ಲೆಗಳಿಂದ ಕಾರ್ಮಿಕರು, ಉದ್ಯೋಗಿಗಳು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ಜೂನ್ 14 ರಿಂದ ಬೆಂಗಳೂರು ಅನ್‌ಲಾಕ್ ಆಗಿರುವ ಕಾರಣ ಬಹುತೇಕರು ತಮ್ಮ ತಮ್ಮ ಕೆಲಸ ಮತ್ತು ಉದ್ಯೋಗಗಳಿಗೆ ಮತ್ತೆ ಮರಳುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚುತ್ತಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ಧಾಣ ಮುಂತಾದ ಕಡೆ ಜನ ಸಂದಣಿ ಉಂಟಾಗುತ್ತಿದೆ. ಇದೆಲ್ಲದರ ಪರಿಣಾಮ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹೊರಗಡೆಯಿಂದ ಬೆಂಗಳೂರು ಪ್ರವೇಶಿಸುವವರಿಗೆ ಕಡ್ಡಾಯ ಕೊರೋನಾ ನೆಗೆಟಿವ್ ವರದಿಯನ್ನು ತರುವಂತೆ ಸಹ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಜಿಲ್ಲಾ ಪ್ರವಾಸದಿಂದ ಮರಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಈ ಸಂಬಂಧ ಕೊರೊನಾ ಟೆಸ್ಟ್ ನೆಗೆಟಿವ್ ವರದಿಯ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ. ಬೆಂಗಳೂರಿಗೆ ಬರುವವರನ್ನು ಕೊರೊನಾ ಟೆಸ್ಟ್ಗೆ ಒಳಪಡಿಸುವ ವ್ಯವಸ್ಥೆ ಮಾಡುವಂತೆ ಆದೇಶಿಸುತ್ತೇನೆ ಎಂದು ತಿಳಿಸಿದ್ದಾರೆ.