ಮಂಗಳೂರು: ತುಳುಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ತುಳು ಸಂಘಟನೆಗಳು ಇಂದು ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿವೆ.
ಉತ್ತರ ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ತುಳು ಮಾತನಾಡುವ ಜನರು ಅಧಿಕವಾಗಿದ್ದಾರೆ. ರಾಜ್ಯ ಸರ್ಕಾರಗಳು ಇದುವರೆಗೂ ತುಳುಭಾಷೆಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಆದ್ದರಿಂದ ತುಳುಭಾಷೆಗೆ ಸಾಂವಿಧಾನಿಕ ಸ್ಥಾನಮಾನ ಒದಗಿಸಿಕೊಡುವಲ್ಲಿ ಸರಕಾರವನ್ನು ಒತ್ತಾಯಿಸಲು ಇಂದು, ಜೂ.13ರಂದು ನಡೆಯುವ ಟ್ವಿಟರ್ ಅಭಿಯಾನದಲ್ಲಿ ಕೈಜೋಡಿಸುವಂತೆ ತುಳುನಾಡ ಜನತೆಗೆ ತುಳು ಸಂಘಟನೆಗಳು ಕರೆ ನೀಡಿವೆ. ಇಂದು ದಿನಪೂರ್ತಿ ನಡೆಯುವ ಈ ಅಭಿಯಾನದಲ್ಲಿ #TuluOfficialinKA_KL ಎಂಬ ಹ್ಯಾಶ್ಟ್ಯಾಗ್ ನೊಂದಿಗೆ ಟ್ವೀಟ್ ಮಾಡುವಂತೆ ತುಳುನಾಡ ಜನತೆಯಲ್ಲಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಇನ್ನು ಈ ಹಿಂದೆ ಹಲವಾರು ಬಾರಿ ಈ ರೀತಿಯ ಅಭಿಯಾನಗಳು ನಡೆದಿದ್ದು ಸರ್ಕಾರಗಳು ಇದರ ಬಗ್ಗೆ ಗಮನ ಹರಿಸರಿಸಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇರುವುದರ ಜೊತೆಗೆ ತುಳುನಾಡ ಜಿಲ್ಲೆಗಳ ಹಲವು ಶಾಸಕರು ಮತ್ತು ಸಂಸದರು ಬಿಜೆಪಿಯವರೇ ಇರುವಾಗ ತುಳುಭಾಷೆಗೆ ಅಧಿಕೃತ ಮಾನ್ಯತೆ ಸಿಗದಿರುವುದು ನಮ್ಮ ದೌರ್ಭಾಗ್ಯವೇ ಸರಿ ಎಂದು ಜೈ ತುಳುನಾಡು ಸಂಘಟನೆಯ ಮುಖ್ಯಸ್ಥ ಜಯಪ್ರಸಾದ್ ಹೇಳಿದ್ದಾರೆ.