ಮಂಗಳಗಂಗೋತ್ರಿ: ಕಳೆದ ಎರಡು ದಿನಗಳ ಹಿಂದೆ ನಿಧನಹೊಂದಿದ ಪ್ರಸಿದ್ಧ ಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಶ್ರದ್ಧಾಂಜಲಿ ಕೋರಲಾಯಿತು.
ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಅವರಣದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು. ಸಿದ್ದಲಿಂಗಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ‘ಡಾ. ಸಿದ್ದಲಿಂಗಯ್ಯ ಅವರು ಲೇಖನಿ ಮೂಲಕವೇ ಸಮಾಜದಲ್ಲಿನ ಅನ್ಯಾಯ ಹಾಗೂ ಅಸಮಾನತೆಯ ವಿರುದ್ಧ ಹೋರಾಡಿ ಸಮಾಜವನ್ನು ತಿದ್ದುವಲ್ಲಿ ಸಫಲರಾಗಿದ್ದರು. ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದರು. ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಸೋಮಣ್ಣ, ಸಾಹಿತ್ಯದ ಮೂಲಕ ಸಿದ್ದಲಿಂಗಯ್ಯ ಅವರ ಹೋರಾಟ ಮತ್ತು ಸಾಧನೆಯ ಮಾತನಾಡಿದರು. ಕನ್ನಡ ವಿಭಾಗದ ಚಂದ್ರಶೇಖರ್ ಅವರು ಸಿದ್ಧಲಿಂಗಯ್ಯ ಅವರ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಉಪನ್ಯಾಸಕರುಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಿದ್ದಲಿಂಗಯ್ಯ ಭಾವಚಿತ್ರಕ್ಕೆ ಪುಷ್ಪರ್ಚನೆಗೈದು ಗೌರವ ನಮನ ಸಲ್ಲಿಸಿದರು.