ಬೆಂಗಳೂರು: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್ಲೋಡ್ ಮಾಡಲು ಎಲ್ಲಾ ಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಪ್ರಥಮ ಭಾಷೆಗೆ 25 ಅಂಕ ಹಾಗೂ ಉಳಿದಂತೆ 5 ವಿಷಯಗಳಿಗೆ ತಲಾ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಸಲಾಗಿದೆ. ಅದರಲ್ಲಿ ಒಟ್ಟು 125 ಅಂಕಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕವನ್ನು ಶಿಕ್ಷಕರು ಈಗಾಗಲೇ ಅಪ್ಲೋಡ್ ಮಾಡುತ್ತಿದ್ದಾರೆ. ಸರಳೀಕೃತ ರೂಪದಲ್ಲಿ ಜುಲೈ ತಿಂಗಳಿನಲ್ಲಿ 240 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ಒಟ್ಟು ಅಂಕಗಳಲ್ಲಿ ಕಟ್ಟಾಫ್ ಪಾಸ್ ಅಂಕವನ್ನು ನಿರ್ಧರಿಸಬೇಕಾಗಿದೆ. ಪ್ರತಿವರ್ಷ ಹತ್ತು ಶೇಕಡಾಕಿಂತ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುತ್ತಿದ್ದಾರೆ. ಈ ನಡುವೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಹೇಗೆ ಕನಿಷ್ಠ ಅಂಕ ನಿರ್ಧರಿಸುವುದು ಎನ್ನುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ, ಕನಿಷ್ಠ ಅಂಕದ ಮಾನದಂಡದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಪಾಸಾಗಲು ಶೇ.35 ಅಂಕ ಪಡೆಯಬೇಕು ಎಂಬ ನಿಯಮ ಇದ್ದೇ ಇರುತ್ತದೆ. ಸದ್ಯವೇ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.