ಬೆಳ್ತಂಗಡಿ: ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ ಅವರನ್ನು ಹೊಗಳಿದ ಕಾರಣಕ್ಕೆ, ತನ್ನ 8 ಜನ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷ ಬಿಸಿ ಮುಟ್ಟಿಸಿದೆ. ಪಕ್ಷದಲ್ಲಿ ಶಿಸ್ತು ಉಲ್ಲಂಘಿಸಿದ ವಿಚಾರ ಸ್ಪಷ್ಟನೆ ಕೋರಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೋಟೀಸು ಜಾರಿ ಮಾಡಲಾಗಿದೆ.
ಜೂನ್ 3 ರಂದು ಬಿಡುಗಡೆಯಾದ ಸ್ಥಳೀಯ ವಾರ ಪತ್ರಿಕೆಯೊಂದರಲ್ಲಿ ಬಿಜೆಪಿ ಯ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರ ಶಾಸಕತ್ವಕ್ಕೆ ಮೂರು ವರ್ಷ ಪೂರೈಸಿರುವ ಪ್ರಯುಕ್ತ ಕಾಂಗ್ರೆಸ್ ನಾಯಕರು ಶುಭಕೋರಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ, ಲೋಕೇಶ್ವರಿ ವಿನಯಚಂದ್ರ, ನೋಟರಿ ವಕೀಲರಾದ ಭಗೀರಥ ಜಿ, ಕೃಷ್ಣಪ್ಪ ಪೂಜಾರಿ, ಕೆ.ನಾರಾಯಣ ರಾವ್ ಶಿರ್ಲಾಲು, ಕೆಲ್ಲಗುತ್ತಿನ ನಿರಂಜನ ಬಾವಂತಬೆಟ್ಟು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೋದರರಾದ ಕೆ.ಎಸ್.ಯೋಗೀಶ್ ಕುಮಾರ್ ನಡಕ್ಕರ , ಪಿ.ಕೆ.ರಾಜು ಪೂಜಾರಿಯವರು ಶುಭ ಹಾರೈಸಿ ಶಾಸಕರ ಕಾರ್ಯವೈಖರಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ವಿಚಾರ ತಿಳಿದ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ರವರು ಆಕ್ರೋಶಗೊಂಡಿದ್ದರು. ಜಾಹಿರಾತಿನ ಬಗ್ಗೆ ಕಾಂಗ್ರೇಸ್ ಪಕ್ಷದಲ್ಲಿ ಭಾರಿ ಸಂಚಲನ ಮೂಡಿತ್ತು. ಈ ನಡವಳಿಕೆ ಕಾಂಗ್ರೆಸ್ ಪಕ್ಷದ ಶಿಸ್ತಿಗೆ ವಿರುದ್ಧವಾಗಿ ಕಂಡು ಬಂದಿರುವುದರಿಂದ ಈ ಬಗ್ಗೆ ಏಳು ದಿನಗಳ ಒಳಗೆ ಸ್ಪಷ್ಟೀಕರಣ ನೀಡಬೇಕು ಎಂದು ನಾಯಕರುಗಳಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಹಾಗೂ ಗ್ರಾಮೀಣ ಅಧ್ಯಕ್ಷ ರಂಜನ್.ಜಿ ಗೌಡ ಜಾರಿ ಮಾಡಿದ ನೋಟೀಸ್ ನಲ್ಲಿ ತಿಳಿಸಿದ್ದಾರೆ.