ಮೈಸೂರು: ಮೈಸೂರಿನ ಜನರ ಕುಡಿಯುವ ನೀರು ಬಳಸಿಕೊಂಡು ಈಜುಕೊಳ ಕಟ್ಟಿಸಿಕೊಂಡ ರೋಹಿಣಿ ಸಿಂಧೂರಿ ನಿಜವಾಗಿಯೂ ಐಎಎಸ್ ಮಾಡಿದ್ದಾರಾ ಅನ್ನೋದೇ ಡೌಟ್ ಎಂದು ಮಾಜಿ ಸಚಿವ, ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ನೀವು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು ಮೈಸೂರಿಗೆ ಬಂದು 7 ತಿಂಗಳ ಅವಧಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ. ಈಗಲೂ ನೀವು ಐಎಎಸ್ ಅಧಿಕಾರಿಯೇ ಆಗಿದ್ದೀರಿ, ಕರ್ನಾಟಕದಲ್ಲೇ ಇದ್ದೀರಿ. ಸರ್ಕಾರಿ ಭೂಮಿ ಉಳಿಸಿದ್ದರೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿ. ಅಥವಾ ನೀವೇ ಸೃಷ್ಟಿ ಮಾಡಿಸಿಕೊಂಡಿರುವ ಫೇಸ್‌ಬುಕ್ ಅಕೌಂಟ್‌ನಲ್ಲಿ ದಾಖಲೆ ಬಹಿರಂಗಪಡಿಸಿ. ಯಾವಾಗ ನೀವು ಆಂಧ್ರದ ಲಾಭಿ ಮಾಡಿ ಕರ್ನಾಟಕದ ಅಧಿಕಾರಿ(ಬಿ.ಶರತ್) ಎತ್ತಂಗಡಿ ಮಾಡಿದ್ದೀರೋ ಅಂದಿನ ದಿನದಿಂದಲೂ ನಿಮ್ಮ ವಿರುದ್ಧ ನಾನು ಆರೋಪ ಮಾಡುತ್ತ ಬಂದಿದ್ದೇನೆ.
ಅಂದಿನಿಂದಲೇ ನೀವು ಸರ್ಕಾರಿ ಭೂಮಿ ಉಳಿಸುವ ಪ್ರಯತ್ನ ಮಾಡಬಹುದಿತ್ತಲ್ವಾ..? ಎಂದು ರೋಹಿಣಿ ಅವರನ್ನು ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 5000 ಜನ ಕೊರೊನಾ ಸೊಂಕಿತರು ಸತ್ತಿದ್ದಾರೆ.
ಅಧಿಕೃತ ದಾಖಲಾತಿ ಪ್ರಕಾರ 3000 ಜನರು ಸತ್ತಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಸಾವಿನ ವಿಷಯದಲ್ಲೂ ಭ್ರಷ್ಟಾಚಾರ ಎಸಗಿದ್ದಾರೆ. ಮೈಸೂರಿನಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇವರಿಗೆ ಸ್ವಿಮ್ಮಿಂಗ್ ಮಾಡೊಕೆ ಜನರ ಕುಡಿಯೋ ನೀರು ಬಳಸಿಕೊಂಡಿದ್ದಾರೆ. ಇವರಿಗಿಂತ ಮುಂಚೆ ಇದ್ದ ಜಿಲ್ಲಾಧಿಕಾರಿಗಳ ಮನೆಯ ಕೆಇಬಿ ಬಿಲ್ ನೋಡಿದರೆ
ಕೇವಲ 4 ಅಥವಾ 5ಸಾವಿರ ಕರೆಂಟ್ ಬಿಲ್ ಬಂದಿದೆ. ರೋಹಿಣಿ ಸಿಂಧೂರಿ ಉಪಯೋಗಿಸಿರುವ ಕೆಇಬಿ ಬಿಲ್ ನೋಡಿದರೆ ಒಂದೊಂದು ತಿಂಗಳಲ್ಲಿ 50ಸಾವಿರ ತೋರಿಸುತ್ತಿದೆ. ಯಾವ ಮಂತ್ರಿ ಮನೆಯಲ್ಲೂ ಇಷ್ಟು ದೊಡ್ಡ ಮೊತ್ತದ ಕರೆಂಟ್ ಬಿಲ್ ಬಂದಿಲ್ಲ. ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿ ವೇತನ ಇವರ ಕರೆಂಟ್ ಬಿಲ್ ಗೆ ಸಮ. ಇಂತವರಿಂದ ಕರ್ನಾಟಕ ಉಳಿಯಬೇಕು. ಎಂದು ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ನಾನು ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ ಆರೋಪಗಳನ್ನು ಒಳಗೊಂಡಂತೆ 10 ಅಂಶಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದ ದೇವಾಲಯಗಳು ಕುಸಿದು ಬೀಳುತ್ತಿದ್ದರೂ 200 ಕೋಟಿ ರೂ.ಗಳನ್ನು ಆಂಧ್ರಕ್ಕೆ ನೀಡಿದ್ದರು.
4G ವಿನಾಯಿತಿ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ. ಕೇವಲ 16 ಲಕ್ಷ ಹಣ ಬಳಸಿ ಪಾರಂಪರಿಕ ಕಟ್ಟಡದ ನವೀಕರಣ ಮಾಡಿದ್ದಾರೆ. ಅದಾದ ನಂತರ ಉಳಿದ ಹಣದಲ್ಲಿ ಈಜುಕೊಳ, ಜಿಮ್ ನಿರ್ಮಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಬರೋಬ್ಬರಿ 50 ಸಾವಿರ ಕರೆಂಟ್ ಬಿಲ್ ಬರುತ್ತಿತ್ತು. ಆದರೂ ಇವರು ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿ. ಅದೇನ್ ಸಿಂಗಂವೋ ಸಿಂಗಳೀಕನೋ ನನಗಂತು ತಿಳಿಯುತ್ತಿಲ್ಲ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ.? ಎಂದು ಪ್ರಶ್ನಿಸುತ್ತಾ ಸುದ್ದಿಗೋಷ್ಟಿಯುದ್ಧಕ್ಕೂ ಶಾಸಕ ಸಾ.ರಾ.ಮಹೇಶ್ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.