ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚಾರ ನಡೆಸಿದ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ಹಿಂದಿರುಗಿಸಲು ಕರ್ನಾಟಕ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಕೊರೋನ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ಅಂತ್ಯದ ವೇಳೆಗೆ ಲಾಕ್ಡೌನ್ ಘೋಷಣೆಯಾದಾಗಿನಿಂದ ರಾಜ್ಯದ್ಯಂತ ನಿಯಮ ಉಲ್ಲಂಘಿಸಿದ ಲಕ್ಷಗಟ್ಟಲೆ ವಾಹನಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ಲಾಕ್ಡೌನ್ ಮುಗಿಯದೆ ವಾಹನಗಳನ್ನು ಮಾಲೀಕರು ಹಿಂಪಡೆಯುವಂತಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ವಾಹನ ಮಾಲೀಕರು ಪೊಲೀಸ್ ಠಾಣೆಯಲ್ಲಿ ದಂಡ ಕಟ್ಟಿ ತಮ್ಮ ವಾಹನಗಳನ್ನು ಹಿಂಪಡೆಯಬಹುದಾಗಿದೆ.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು, 1.37 ಲಕ್ಷ ದ್ವಿಚಕ್ರ ವಾಹನ, 7,432 ಕಾರುಗಳು, 7,122 ಇತರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯ ಅಫಿಡವಿಟ್ ಒಳಗೊಂಡ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಶೇಷ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದರು. ಇಷ್ಟೊಂದು ವಾಹನಗಳನ್ನು ನಿಲುಗಡೆ ಮಾಡುವುದು ಪೊಲೀಸ್ ಇಲಾಖೆಗೆ ಕಷ್ಟವಾಗಲಿದೆ. ಮಾಲೀಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು. ದ್ವಿಚಕ್ರ ವಾಹನಗಳ ಮಾಲೀಕರಿಂದ ₹500, ನಾಲ್ಕು ಚಕ್ರ ವಾಹನಗಳ ಮಾಲೀಕರಿಂದ ₹1 ಸಾವಿರ, ಸರಕು ಸಾಗಣೆ ವಾಹನಗಳ ಮಾಲೀಕರಿಂದ ₹2 ಸಾವಿರ ದಂಡ ಸಂಗ್ರಹಿಸಬೇಕು’ ಎಂದು ಹೈ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.