ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಚಂದ್ರಗ್ರಹಣಕ್ಕೆ ಭೂಮಿಯ ಕೆಲ ಪ್ರದೇಶಗಳು ಸಾಕ್ಷಿಯಾಗಿದ್ದು, ಇದೀಗ ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ ಸೂರ್ಯ ಗ್ರಹಣ ಕಾಣಿಸಲಿದ್ದು, ಅದನ್ನು ರಿಂಗ್ ಆಫ್ ಫೈರ್(ಬೆಂಕಿಯ ಉಂಗುರ) ಎಂದು ಕರೆಯಲಾಗಿದೆ.
ರಿಂಗ್ ಆಫ್ ಫೈರ್ ಎಂದರೇನು?:
ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಬಹು ದೂರದಲ್ಲಿದ್ದಾಗ ಸೂರ್ಯನಿಗೆ ಅಡ್ಡ ಬರುವ ಪರಿಣಾಮ ಅದು ಉಂಗುರ ತೊಡಿಸಿದ ರೀತಿಯಲ್ಲಿ ಕಾಣಿಸಲಿದೆ ಎಂದು ನಾಸಾ ಹೇಳುವುದು. ಇದನ್ನೇ ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ದೂರದಲ್ಲಿರುವ ಕಾರಣ ಚಂದ್ರನು ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳುವುದಲ್ಲದೆ, ಸೂರ್ಯನ ಬೆಳಕು ಭೂಮಿಗೆ ಬರುವುದನ್ನು ಸಂಪೂರ್ಣವಾಗಿ ತಡೆಯದೇ, ಮಧ್ಯಭಾಗವನ್ನಷ್ಟೇ ಆಕ್ರಮಿಸುತ್ತಾನೆ.
ಹೀಗಾಗಿ ಸೂರ್ಯನ ಹೊರಭಾಗವಷ್ಟೇ ವೃತ್ತಾಕಾರವಾಗಿ ಕಾಣಿಸಲಿದ್ದು, ಅದು ಉಂಗುರ ತೊಡಿಸಿದ ಮಾದರಿಯಲ್ಲಿ ಗೋಚರಿಸುತ್ತದೆ.

ಪ್ರಸ್ತುತ ಗ್ರಹಣದ ಸಂದರ್ಭದಲ್ಲಿ ಸೂರ್ಯನ 10ನೇ ಒಂದು ಭಾಗದಷ್ಟು ಬೆಳಕು ಮಾತ್ರ ಕಾಣಿಸಲಿದೆ. ಕೆಲವೊಂದು ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಧ್ರುವ ಪ್ರದೇಶದಲ್ಲಿ ತಕ್ಕಮಟ್ಟಿಗೆ ಕತ್ತಲಾವರಿಸಲಿದ್ದು ಸರಿಸುಮಾರು 3ನಿಮಿಷ 51ಸೆಕೆಂಡುಗಳ ಕಾಲ ಈ ಪ್ರಮಾಣದ ಸೂರ್ಯಗ್ರಹಣ ಇರಲಿದೆ.
ಎಷ್ಟೊತ್ತಿಗೆ ಘಟಿಸಲಿದೆ?
ಜೂನ್ 10ರ ಸೂರ್ಯಗ್ರಹಣ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1:42ಕ್ಕೆ ಆರಂಭಗೊಂಡು 6:41ಕ್ಕೆ ಕೊನೆಗೊಳ್ಳಲಿದೆ.
ಎಲ್ಲೆಲ್ಲಿ ಕಾಣಿಸಲಿದೆ ಗ್ರಹಣ?:
ಈ ವರ್ಷದ ಮೊದಲ ಸೂರ್ಯಗ್ರಹಣ ಅಥವಾ ಈ ಉಂಗುರ ಸೂರ್ಯಗ್ರಹಣವು ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಗೋಚರವಾಗಲಿದೆ. ಸೈಬೀರಿಯಾ ಮತ್ತು ಉತ್ತರ ಧ್ರುವದಲ್ಲಿಯೂ ಗ್ರಹಣ ಕಾಣಿಸಲಿದೆ. ಪೂರ್ವ ಕರಾವಳಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾಗಶಃ ಗೋಚರಿಸಲಿದೆ ಆದರೆ ಭಾರತ, ಅಮೆರಿಕದಲ್ಲಿ ಗ್ರಹಣ ಕಾಣಿಸುವುದಿಲ್ಲ. ಇನ್ನೂ ಈ ವರ್ಷದ ಇನ್ನೊಂದು ಸೂರ್ಯಗ್ರಹಣ ಈ ವರ್ಷದ ಅಂತ್ಯಕ್ಕೆ ಗೋಚರವಾಗಲಿದ್ದು, ಅದು ಕೂಡ ಭಾರತಕ್ಕೆ ಅಗೋಚರ ಎನ್ನಲಾಗುತ್ತಿದೆ.