ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಸಿಇಟಿ ನಡೆಸಲು ರಾಜ್ಯ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಇಂದು ನಡೆದ ಸಭೆಯಲ್ಲಿ ಆಗಸ್ಟ್ ತಿಂಗಳ 28 ಮತ್ತು 29ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.
ಇಂದು ಉನ್ನತ ಮಟ್ಟದ ಶಿಕ್ಷಣ ತಜ್ಞರುಗಳು, ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಿಇಟಿ ಪರೀಕ್ಷೆಗೆ ಜೂನ್ 15 ರಿಂದ ನೋಂದಣಿ ಆರಂಭವಾಗಲಿದ್ದು ಆಗಸ್ಟ್ 28 ರಂದು ಮ್ಯಾಥಮೆಟಿಕ್ಸ್ ಮತ್ತು ಬಯೋಲಜಿ ಪರೀಕ್ಷೆ ನಡೆಯಲಿದ್ದು 29ರಂದು ಕೆಮಿಸ್ಟ್ರಿ ಹಾಗೂ ಫಿಸಿಕ್ಸ್ ವಿಷಯಗಳ ಪರೀಕ್ಷೆ ನಡೆಯಲಿದೆ. ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪ್ರಥಮ ಪಿಯುಸಿ ಹಾಗೂ 10ನೇ ತರಗತಿ ಅಂಕಗಳ ಆಧಾರದಲ್ಲಿ ತೇರ್ಗಡೆಗೊಳಿಸಲಾಗಿತ್ತು. ಈ ಕಾರಣದಿಂದಾಗಿ ಸಿಇಟಿ ಯಲ್ಲಿ ರಾಂಕ್ ನೀಡಲು ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಪಿಯುಸಿ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.