ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಕೊನೆಯ ಹಂತ ತಲುಪಿದ್ದು, ನ್ಯಾಯಾಲಯ ಮೂವರು ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಒಬ್ಬರನ್ನು ಖುಲಾಸೆಗೊಳಿಸಿ ಇಂದು ಅಂತಿಮ ತೀರ್ಪು ಪ್ರಕಟಿಸಿದೆ.
ಜಿಲ್ಲೆಯ ಇಂದ್ರಾಳಿಯ ಉದ್ಯಮಿ ಭಾಸ್ಕರ್ ಶೆಟ್ಟಿ (52 ವ.) ಅವರನ್ನು ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಅವರನ್ನು ಉಡುಪಿಯ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯ ದೋಷಿಗಳೆಂದು ಪರಿಗಣಿಸಿ ಹಾಗೂ ಸಾಕ್ಷಿ ನಾಶ ಆರೋಪ ಎದುರಿಸುತ್ತಿದ್ದ ರಾಘವೇಂದ್ರ ಎಂಬವರನ್ನು ಖುಲಾಸೆ ಗೊಳಿಸಿ ಆದೇಶಿಸಿದೆ. ಶಿಕ್ಷೆಯ ಪ್ರಮಾಣ ಇಂದು ಸಂಜೆಯೊಳಗಾಗಿ ಪ್ರಕಟವಾಗಲಿದೆ.
5 ವರ್ಷಗಳ ಹಿಂದೆ ಅಂದರೆ, 2016ರ ಜು.28ರಂದು ಅಪರಾಹ್ನ 3 ಗಂಟೆಗೆ ನಡೆದ ಬಹುಕೋಟಿ ಉದ್ಯಮ ಭಾಸ್ಕರ್ ಶೆಟ್ಟಿ ಹತ್ಯೆ ಕರಾವಳಿಯ ಜನತೆಯನ್ನು ಬೆಚ್ಚಿಬೀಳಿಸಿತ್ತು. ಆರೋಪಿಗಳು ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣವನ್ನು ಬಯಲಿಗೆಳೆದಿದ್ದು, ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ನನ್ನು ಮತ್ತು ಆ.8ರಂದು ನಿರಂಜನ್ ಭಟ್ ನನ್ನು ಬಂಧಿಸಿದ್ದರು. ಸದ್ಯ ನಿರಂಜನ್ ಭಟ್ಟ ಹಾಗೂ ನವನೀತ್ ಶೆಟ್ಟಿ ಜೈಲಿನಲ್ಲಿದ್ದು ಪತ್ನಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.