Ad Widget .

‘ಕೆಲಸ ಮಾಡುವ ಟೈಂನಲ್ಲಿ ವರ್ಗಾವಣೆ ಮಾಡಿದ್ರು. ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದೇನೆ’- ರೋಹಿಣಿ ಸಿಂಧೂರಿ

Ad Widget . Ad Widget .

ಮೈಸೂರು, ಜೂನ್ 7: ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾನಾಗ್ ನಡುವಿನ ಜಟಾಪಟಿ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಬೇರೆ ಅಧಿಕಾರಿಗಳನ್ನು ನಿಯೋಜಿಸಿದೆ.
ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿಯನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆ ಮಾಡಿದ್ದು, 2020ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗುವುದಕ್ಕೂ ಮುನ್ನ ರೋಹಿಣಿ ಸಿಂಧೂರಿ ಇದೇ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಾಗಿದ್ದರು.
“ಮೈಸೂರು ಜಿಲ್ಲೆ ನನಗೆ ತಾಯಿ ಮನೆಯ ಅನುಭವ ನೀಡಿದ್ದು, ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ” ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ಬೇಸರ ವ್ಯಕ್ತಪಡಿಸಿದರು.

Ad Widget . Ad Widget .

ಮೈಸೂರಿನಲ್ಲಿ ನೂತನ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ಒಬ್ಬ ಮಗಳಾಗಿ ಮೈಸೂರಿನ ಎಲ್ಲ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಟೈಂನಲ್ಲಿ ಈ ವರ್ಗಾವಣೆ ಆಗಿದೆ. ಹೀಗಾಗಿ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ” ಎಂದು ಬೇಸರ ಹೊರಹಾಕಿದ್ದಾರೆ.

“ವರ್ಗಾವಣೆಗೂ ಮುನ್ನ ಏನು ನಡೆದಿದೆ, ಹೇಗೆ ನಡೆದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹತಾಶೆ ಹಾಗೂ ಅಭದ್ರತೆಗೆ ಈ ರೀತಿ ಮಾತನಾಡೋದು ಸರಿಯಲ್ಲ. ಯಾವುದೋ ಅಧಿಕಾರಿಯನ್ನು ಎತ್ತಂಗಡಿ ಮಾಡಿ, ಮಿಷನ್ ಮುಗಿಯಿತು ಅಂದಿಕೊಳ್ಳುವುದು ತಪ್ಪು. ಈ ಥರ ಬೆಳವಣಿಗೆ ಯಾವ ಜಿಲ್ಲೆ, ಯಾವ ಸಂಸ್ಥೆಯಲ್ಲಿ ಆದರೂ ವ್ಯವಸ್ಥೆಯನ್ನು ಸರಿ ಮಾಡುವುದಕ್ಕೆ ಆಗುವುದಿಲ್ಲ” ಎಂದಿದ್ದಾರೆ.

“ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ಬಗಾದಿ ಗೌತಮ್‌ರಿಗೆ ಶುಭ ಕೋರಲು ಬಂದಿದ್ದೇನೆ. ಮೈಸೂರು ಜಿಲ್ಲೆಯ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಕೋವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ” ಎಂದು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಭೂ ಮಾಫಿಯಾಗೆ ಬಲಿಯಾದೀರಾ ಅನ್ನುವ ಪ್ರಶ್ನೆಗೆ, “ನೋ ಕಾಮೆಂಟ್’ ಎಂದ ರೋಹಿಣಿ ಸಿಂಧೂರಿ, ಥ್ಯಾಂಕ್ಯೂ ಮೈಸೂರು ಎಂದು ಹೇಳಿ ಮೈಸೂರಿನಿಂದ ನಿರ್ಗಮಿಸಿದರು.

ಸಾಮಾಜಿಕ ಜಾಲತಾಣದಲ್ಲಿಯೂ ಹಲವರು ರೋಹಿಣಿ ಸಿಂಧೂರಿ ವರ್ಗಾವಣೆಗೆ ಬೇಸರ ವ್ಯಕ್ತಪಡಿಸಿದ್ದು, ರಾಜಕೀಯ ಒಳಸಂಚಿಗೆ ಸಿಲುಕಿ ವರ್ಗಾವಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *