ಮಂಗಳೂರು. ಜೂನ್ 7: ರಾಜ್ಯ ಸರ್ಕಾರ ರಾಜ್ಯವನ್ನು ಅನ್‌ಲಾಕ್ ಮಾಡುವುದಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಂಗಳವಾರದಿಂದ ಪ್ರತ್ಯೇಕ ಟಫ್ ರೂಲ್ಸ್ ಜಾರಿಯಾಗಲಿದೆ.
ಜೂ.8 ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಮಂಗಳೂರು ನಗರ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಚೆಕ್‌ಪೋಸ್ಟ್ ಅಳವಡಿಕೆ ಮಾಡಲಾಗಿದೆ.
ಅನಾವಶ್ಯಕವಾಗಿ ಸಂಚರಿಸುವ ವಾಹನಗಳ ಜಪ್ತಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅಧಿಕಾರಿಗಳ ಜೊತೆ ವಾದ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಮಂಗಳವಾರದಿಂದ ಕೋವಿಡ್ ಪ್ರಕರಣ ಅಧಿಕವಿರುವ 11 ಗ್ರಾಮಗಳಲ್ಲಿ ಮದುವೆ ಸಮಾರಂಭಗಳಿಗೆ ನೀಡಲಾದ ಅನುಮತಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ರೇಟ್ ಶೇ.15.84 ಇದ್ದು, ಸಾವಿನ ಪ್ರಮಾಣ ಶೇ.1.04ರಷ್ಟಿದೆ. ಪ್ರತಿದಿನ 600ಕ್ಕಿಂತ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಯ 11 ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳಿದ್ದು, ಈ ಸಂದರ್ಭದಲ್ಲಿ ಅನ್‌ಲಾಕ್ ಆದರೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ.