ನವದೆಹಲಿ: ಲಸಿಕೆ ಹಂಚಿಕೆಯಲ್ಲಿ ರಾಜ್ಯಗಳಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಲಸಿಕಾ ನೀತಿಯಲ್ಲಿ ಯೂ ಟರ್ನ್ ಹೊಡೆದಿದೆ.
ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇದೇ 21ರಿಂದ ಕೇಂದ್ರ ಸರ್ಕಾರವೇ ಹದಿನೆಂಟು ವರ್ಷ ಮೀರಿದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಕಟಿಸಿದ್ದು, ರಾಜ್ಯಗಳಿಗೆ ಲಸಿಕೆ ಹಂಚುವ ಜವಾಬ್ದಾರಿಯನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಕೊರೊನ ಎರಡನೇ ಅಲೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಶಕ್ತಿಮೀರಿ ಪ್ರಯತ್ನ ನಡೆಸಿದೆ. ಅದಾಗ್ಯೂ ಹಲವು ಮಂದಿ ತಮ್ಮವರನ್ನು ಕಳೆದುಕೊಂಡಿದ್ದು ವಿಷಾದನೀಯ. ಲಸಿಕೆ ಹಂಚಿಕೆಯಲ್ಲಿ ಭಾರತವೇ ಮುಂದಿದ್ದರೂ ಕೆಲವೊಂದು ಟೀಕೆಗಳಿಗೆ ಒಳಗಾಗಿದೆ. 100 ವರ್ಷಗಳ ಬಳಿಕ ಬಂದ ಮಹಾಮಾರಿಯ ಸವಾಲಿಗೆ ವಿಶ್ವವೇ ಗುರಿಯಾಗಿತ್ತು. ಈ ನಡುವೆ ವಿವಿಧ ವೈದ್ಯಕೀಯ ಸೌಕರ್ಯಗಳ ಪೂರೈಕೆ ಮಾಡಲಾಗಿತ್ತು ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಕುರಿತು ವಿಶ್ಲೇಷಿಸಿದ ತಜ್ಞರು ಹದಿನೆಂಟು ಮೀರಿದ ಎಲ್ಲರಿಗೂ ಉಚಿತ ಲಸಿಕೆ ನೀಡಲೇಬೇಕಿತ್ತು. ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳು ಇದನ್ನೇ ಹೇಳಿದ್ದು, ಜನರು ಕೂಡ ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದರು. ಈಗ ಎಚ್ಚೆತ್ತುಕೊಂಡ ಸರ್ಕಾರ ಲಸಿಕಾ ನೀತಿಯಲ್ಲಿ ಬದಲಾವಣೆ ಮಾಡಿದ್ದು, ಜನಾಗ್ರಹಕ್ಕೆ ಸಿಕ್ಕ ಗೆಲುವೆಂದು ಅಭಿಪ್ರಾಯ ಪಟ್ಟಿದ್ದಾರೆ