ಬೆಂಗಳೂರು: ಗೂಗಲ್ ಕನ್ನಡಕ್ಕೆ ಅವಮಾನ ಮಾಡಿ ಕ್ಷಮೆಯಾಚಿಸಿದ ಬೆನ್ನಲ್ಲೇ ಆನ್ಲೈನ್ ಮಾರ್ಕೆಟ್ ನಲ್ಲಿ ಹೆಸರುವಾಸಿ ತಾಣ ಅಮೆಜಾನ್ ಕನ್ನಡಕ್ಕೆ ಅವಮಾನ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಈ ಇ-ಕಾಮರ್ಸ್ ದೈತ್ಯ, ಕನ್ನಡದ ಬಾವುಟ ಮತ್ತು ಲಾಂಛನವುಳ್ಳ ಬಿಕಿನಿ ತಯಾರಿಸಿ ಮಾರಾಟಕ್ಕಿರಿಸಿ ಇದೀಗ ಆಕ್ರೋಶಕ್ಕೆ ಗುರಿಯಾಗಿದೆ.
ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೆಜಾನ್ ವೆಬ್ಸೈಟ್ ಒಂದರಲ್ಲಿ ಈ ತರಹದ ಒಳಉಡುಪು ಮಾರಾಟಕ್ಕಿಟ್ಟಿರುವುದು ಗೋಚರಿಸಿತ್ತು. ಆ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಕನ್ನಡಾಭಿಮಾನಿಗಳು ಅಮೆಜಾನ್ ವಿರುದ್ಧ ಆಕ್ರೋಶದ ಕಿಡಿಕಾರಲು ಆರಂಭಿಸಿದ್ದಾರೆ. ಆದರೆ ಭಾರತದ ಅಮೆಜಾನ್ ಪುಟದಲ್ಲಿ ಈ ಬಗ್ಗೆ ಹುಡುಕಾಡಿದಾಗ ಅಂತಹ ಉತ್ಪನ್ನ ಮಾರಾಟಕ್ಕಿರುವುದು ಗೋಚರಿಸುತ್ತಿಲ್ಲ. ಇನ್ನು ಸದ್ಯ ಕೆನಡಾದ ಅಧಿಕೃತ ಅಮೆಜಾನ್ ಮಾರಾಟದ ಪುಟದಲ್ಲೂ ಕೂಡ ee ಬಿಕಿನಿ ಗೋಚರಿಸುತ್ತಿಲ್ಲ. ಆದರೆ ನೆಟ್ಟಿಗರು ಆಕ್ರೋಶ ಹೊರಹಾಕಲು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಉಪಯೋಗಿಸಿದ ಲಿಂಕ್ನಲ್ಲಿ ಅದು ಗೋಚರಿಸುತ್ತಿದೆ. ಆದ್ದರಿಂದ ಕನ್ನಡ ಅಭಿಮಾನಿಗಳು ಅಮೆಜಾನ್ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ.