ಶ್ರೀನಗರ: ಜಗತ್ತನ್ನೇ ನಡುಗಿಸಿ ಕ್ರೌರ್ಯ ಮೆರೆಯುತ್ತಿರುವ ಕೊರೋನ ಕಂಡರೆ, ಕೇಳಿದರೆ ಹಲವರಿಗೆ ಭಯ. ಕಳೆದೆರಡು ವರ್ಷದಲ್ಲಿ ತಾಂಡವವಾಡುತ್ತಿರುವ ಕೊರೋನ ಜೀವ-ಜಗತ್ತನ್ನೇ ನಡುಗಿಸಿದ ಬಿಟ್ಟಿದೆ. ಕೊರೋನ ಹೆಸರು ಕೇಳಿ ಭಯ ಪಡುವುದರಲ್ಲಿ ತಪ್ಪಿಲ್ಲ ಆದರೆ ಕೆಲ ಜನರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಭಯಪಟ್ಟು ಹಿಂಜರಿಯುತ್ತಿರುವುದು ಅಚ್ಚರಿಯ ವಿಷಯ. ಆದರೆ ಇಲ್ಲೊಬ್ಬ ಬರೋಬ್ಬರಿ 124 ವರ್ಷದ ವೃದ್ಧರೊಬ್ಬರು ಮೊದಲ ಡೋಸ್ ಲಸಿಕೆ ಪಡೆದು ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಉಳ್ಳವರಿಗೆ ಸ್ಪೂರ್ತಿ ಎನಿಸಿದ್ದಾರೆ.
ಇವರ ಹೆಸರು ರೆಹತಿ ಬೇಗಂ. ಜಮ್ಮು ಕಾಶ್ಮೀರದ ಬರಾಮುಲ್ಲಾದ ಈ ಹಿರಿಯಜ್ಜಿಯ ವಯಸ್ಸು ಬರೋಬ್ಬರಿ 124. ಆರೋಗ್ಯವಂತರಾಗಿ, ಮನೆಯಲ್ಲಿ ಆರಾಮವಾಗಿ ಆಚೆ ಈಚೆ ಓಡಾಡುತ್ತಾ ಅಕ್ಕಪಕ್ಕದವರಿಗೆ ತನ್ನ ಮುದ್ದು ಮುಖ ತೋರಿಸಿ ಸಂತೋಷ ನೀಡುತ್ತಿದ್ದ ಇವರು ಇದೀಗ ಕೋವಿಡ್-19 ಲಸಿಕೆ ಪಡೆದು ಇಡೀ ದೇಶಕ್ಕೆ ಸಂತೋಷ ನೀಡಿದ್ದಾರೆ. ಇವರ ಈ ಕಾರ್ಯವನ್ನು ಇಡೀ ದೇಶವೇ ಶ್ಲಾಘಿಸುತ್ತಿದೆ. ಇನ್ನು ಲಸಿಕೆ ಪಡೆದುಕೊಂಡ ನಂತರವೂ ತನ್ನ ಆರೋಗ್ಯದಲ್ಲಿ ಹಿಂದಿನಂತೆ ಸ್ಥಿರತೆ ಕಾಯ್ದುಕೊಂಡಿರುವ ಈ ಅಜ್ಜಿ, ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ವಿದ್ಯಾವಂತ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ವೈದ್ಯಕೀಯ ವಲಯ ಹೇಳಿಕೊಳ್ಳುತ್ತದೆ.