ಕಾರ್ಕಳ: ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ಕು ಸಣ್ಣ ಪ್ರಾಯದ ಎಳೆ ಮಕ್ಕಳನ್ನು ಸಮಾಜ ಸೇವಕಿಯೊಬ್ಬರ ಸಮಯೋಚಿತ ಮಾರ್ಗದರ್ಶನದಿಂದ ಉಡುಪಿ ಮಕ್ಕಳ ಪುನರ್ವಸತಿ ಕೇಂದ್ರದವರು ರಕ್ಷಣೆ ಮಾಡಿದ ಘಟನೆ ಜೂ.2ರಂದು ನಡೆದಿದೆ.
ಇಲ್ಲಿನ ನಿಟ್ಟೆ ಗ್ರಾಮ ಪಂಚಾಯತು ಮದನಾಡು ಎಂಬಲ್ಲಿ ಕೌಟುಂಬಿಕ ಕಲಹದಿಂದ ಪದ್ಮನಾಭ ಎಂಬವರ ಪತ್ನಿ ಗಂಡ, ಮನೆ, ಮಕ್ಕಳನ್ನು ತೊರೆದು ಹೋಗಿದ್ದಾರೆ. ದಂಪತಿಗೆ ನಾಲ್ಕು ಮಂದಿ ಮಕ್ಕಳಿದ್ದು, ತಾಯಿ ಇಲ್ಲದೆ ತಂದೆಯೊಂದಿಗೆ 1 ಹೆಣ್ಣು ಸೇರಿ ನಾಲ್ಕು ಮಂದಿ ಮಕ್ಕಳು ಅಸಹಾಯಕ ಸ್ಥಿತಿಯಲ್ಲಿದ್ದರು. ಸುರಕ್ಷಿತವಲ್ಲದೆ, ಸರಿಯಾಗಿ ಅನ್ನ ಆಹಾರವಿಲ್ಲದೆ ಆರೈಕೆಯೂ ಇಲ್ಲದೆ ತಂದೆಯೊಂದಿಗೆ ಮಕ್ಕಳು ನಿರ್ಗತಿಕ ಸ್ಥಿತಿಯಲ್ಲಿದ್ದುದನ್ನು ಕಂಡ ಸಮಾಜ ಸೇವಕಿ ರಮೀತಾ ಶೈಲೇಂದ್ರರವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೂ.2ರಂದು ಸ್ಥಳಕ್ಕೆ ಭೇಟಿ ನೀಡಿತ್ತು. ತಾಯಿ ಇಲ್ಲದೆ ತಂದೆಯ ಆರೋಗ್ಯ ಸರಿಯಿಲ್ಲದೆ ಮಕ್ಕಳಿರುವ ಪರಿಸ್ಥಿತಿಯನ್ನು ಕಂಡು ನಾಲ್ಕು ಮಕ್ಕಳನ್ನು ಉಡುಪಿ ಪುನಾರ್ವಸತಿ ಕೇಂದ್ರ ಕರೆದೊಯ್ದು ರಕ್ಷಣೆ ನೀಡಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಪುಟಾಡೋ ಆದೇಶದಂತೆ 4 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಸಮಾಜ ಸೇವಕಿ ರಮಿತ ಶೈಲೇಂದ್ರ ಆ ಮನೆಗೆ ಭೇಟಿ ನೀಡಿ ದಿನಸಿ ಕಿಟ್ ನೀಡಿದ್ದ ಮಕ್ಕಳ ಸ್ಥಿತಿಯನ್ನು ಕಂಡು ಮರುಗಿ ಸಂಬಂಧಿಸಿದವರ ಗಮನಕ್ಕೆ ತಂದಿದ್ದರು. ಅವರ ಮಾನವೀಯತೆಯಿಂದ ನಾಲ್ಕು ಮಕ್ಕಳು ಸುರಕ್ಷಿತರಾಗಿದ್ದು ರಮಿತಾರವರ ಸಮಾಜ ಮುಖಿ ಸ್ಪಂದನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ರಮಿತಾಶೈಲೆಂದ್ರ ಮೂಲತ; ಪುತ್ತೂರಿನವರಾಗಿದ್ದು ಕಾರ್ಕಳದಲ್ಲಿ ಇವರ ಪತಿ ಉದ್ಯಮ ನಡೆಸುತ್ತಿದ್ದಾರೆ. ರಮಿತಾರವರ ಸಮಾಜ ಸೇವೆಗೆ ಇತ್ತೀಚೆಗಷ್ಟೆ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ರಾಜ್ಯ ಸರಕಾರದಿಂದ ದೊರಕಿತ್ತು.