ಬೆಂಗಳೂರು: ರಾಜ್ಯದಲ್ಲಿ ಜೂನ್ 7ರ ನಂತರ ಬಿಗಿ ಕ್ರಮದೊಂದಿಗೆ ಲಾಕ್ಡೌನ್ ಮುಂದುವರಿಕೆ ಖಚಿತವಾಗಿದ್ದು, ಎಷ್ಟು ದಿನ ವಿಸ್ತರಣೆ ಎಂಬ ನಿರ್ಧಾರವನ್ನು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಪ್ರಕಟಿಸಲಾಗುವುದು ಎಂದು ಸಿ.ಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ತಜ್ಞರ ಸಮಿತಿ ಮುಖ್ಯಸ್ಥರು, ಸಚಿವರು, ಹಾಗೂ ಪ್ರಮುಖ ಅಧಿಕಾರಿ ವರ್ಗದವರ ಜೊತೆ ಸಭೆ ನಡೆಸಿದ ಬಳಿಕ ಈ ವಿಚಾರ ತಿಳಿಸಿದ್ದಾರೆ. ನಾಳೆಯಿಂದ ರಫ್ತು ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತು ಖರೀದಿಗೆ ಸಮಯ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆ ವರೆಗಿನ ಅವಧಿಯನ್ನು ಕೊಂಚ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ರೈತರ ನೆರವಿಗೆ ಧಾವಿಸಿದ ಸರ್ಕಾರ, ರೈತರ ಬೆಳೆ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಲಿದೆ. ರೈತರಿಂದಲೇ ನೇರವಾಗಿ ಉತ್ಪನ್ನ ಖರೀದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕೆಲವು ವಲಯಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ಸೀರಿಯಲ್ ಚಿತ್ರೀಕರಣಕ್ಕೆ, ಸಲೂನ್ ಗಳಿಗೆ ಷರತ್ತುಬದ್ಧ ಅನುಮತಿ ನೀಡುವ ಮೂಲಕ ಲಾಕ್ ಡೌನ್ ಮುಂದೂಡಲಾಗುತ್ತದೆ ಎಂದು ಹೇಳಲಾಗಿದೆ.