ಬೆಂಗಳೂರು (ಜೂನ್ 2): ದೇಶಾದ್ಯಂತ ಕೊರೋನಾ ಅಬ್ಬರ ಹೆಚ್ಚಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಜೂನ್ 7ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಅದಾದ ಬಳಿಕವೂ ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಿಸಬೇಕೇ? ಬೇಡವೇ?, ಲಾಕ್ಡೌನ್ ವಿಸ್ತರಣೆ ಮಾಡಿದರೆ ಅದರಿಂದ ಆಗುವ ತೊಂದರೆಗಳೇನು? ಮಾಡದಿದ್ದರೆ ಆಗುವ ಪರಿಣಾಮಗಳೇನು? ಎಂಬ ಬಗ್ಗೆ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯವರು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ವರದಿ ನೀಡಿದ್ದಾರೆ. ಇಂದು ಉನ್ನತ ಮಟ್ಟದ ತಜ್ಞರ ಜೊತೆ ತಮ್ಮ ಕೃಷ್ಣಾ ನಿವಾಸದಲ್ಲಿ ಸಂಜೆ 4.30ಕ್ಕೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಬಳಿಕ, ಕೊರೋನಾ ತಜ್ಞರು ನೀಡಿರುವ ವರದಿ ಬಗ್ಗೆ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಚರ್ಚೆ ನಡೆಸಲಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಅನೇಕ ಸಚಿವರು ಜೂನ್ 7ರ ಬಳಿಕವೂ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಒಲವು ತೋರಿದ್ದಾರೆ.
ಆದರೆ, ಡಿಸಿಎಂ ಅಶ್ವಥ್ ನಾರಾಯಣ ಜೂನ್ 7ರ ಬಳಿಕ ಹಂತಹಂತವಾಗಿ ಅನ್ಲಾಕ್ ಜಾರಿಗೊಳಿಸುವ ಸೂಚನೆ ನೀಡಿದ್ದರು. ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಜೂನ್ 7ರ ನಂತರ ಲಾಕ್ಡೌನ್ ವಿಸ್ತರಣೆ ಮಾಡಬೇಕಾ? ಬೇಡವಾ? ಎಂಬುದನ್ನು ನಿರ್ಧರಿಸುವ ಸಾಧ್ಯತೆಯಿದೆ. ಹಲವು ತಜ್ಞರು ಈವರೆಗೆ ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸಲು ಇವರು ಏಕೈಕ ಮಾರ್ಗ ಲಾಕ್ಡೌನ್ ಮಾತ್ರ. ಹೀಗಾಗಿ ಲಾಕ್ಡೌನ್ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ, ಜೂನ್ ಕೊನೆಯವರೆಗೆ ಲಾಕ್ಡೌನ್ ಇದ್ದರೆ ಒಳ್ಳೆಯದು ಎನ್ನಲಾಗುತ್ತಿದೆ. ರಾಜ್ಯದ ಪಾಸಿಟಿವಿಟಿ ದರ ಇನ್ನೂ ಶೇಕಡಾ 13.57ರಷ್ಟಿದೆ. ಆದರೂ ಕರ್ನಾಟಕ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂದು ವಿರೋಧಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳ ಕಾರಣದಿಂದಾಗಿ ಇಂದು ಸಿಎಂ ಯಡಿಯೂರಪ್ಪ ತಮ್ಮ ಸಂಪುಟದ ಸಚಿವರ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಅಗತ್ಯ ಬಿದ್ದರೆ ಲಾಕ್ ಡೌನ್ ಮುಂದುವರೆಸುತ್ತೇವೆ. ಆದರೆ ಎಷ್ಟು ದಿನ ಎಂಬುದನ್ನು ನಿರ್ದರಿಸಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮತ್ತೆ ಮುಂದುವರೆಯುವುದು ಬಹುತೇಕ ಪಕ್ಕಾ ಆಗಿದೆ.