ಲಖನೌ: ರಾಜ್ಯದ ಅಲಿಗಡದಲ್ಲಿ ಕಳೆದ ವಾರ ವಿಷಕಾರಿ ಮದ್ಯಸೇವಿಸಿ ಆಸ್ಪತ್ರೆ ಸೇರಿದ್ದವರಲ್ಲಿ ನಿನ್ನೆ ಒಂದೇ ದಿನ 11 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ.
ಘಟನೆ ನಡೆದ ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 71 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಇವುಗಳ ಪೈಕಿ 36 ಜನರ ಸಾವಿಗೆ ವಿಷಕಾರಿ ಮದ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಉಳಿದ 35 ಶವಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅವರ ಸಾವಿಗೂ ವಿಷಯುಕ್ತ ಮದ್ಯವೇ ಕಾರಣ ಎಂದು ಶಂಕಿಸಲಾಗಿದೆ. ಆದರೆ, ಹೆಚ್ಚಿನ ವೈದ್ಯಕೀಯ ವರದಿ ಬಂದ ನಂತರವೇ ಸಾವಿಗೆ ಖಚಿತ ಕಾರಣ ತಿಳಿಯಲಿದೆ ಎಂದು ಸ್ಥಳೀಯ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಿರುವ ಉತ್ತರ ಪ್ರದೇಶ ಸರ್ಕಾರ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತು ಮಾಡಿದೆ. ರಾಜ್ಯದಲ್ಲಿ ಹಲವೆಡೆ ಅಬಕಾರಿ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಲಾಗುತ್ತಿದೆ. ಇನ್ನು ಮೂರು ದಿನಗಳಲ್ಲಿ ಪ್ರಕರಣದ ಪೂರ್ಣ ವಿವರ ನೀಡುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿರುವ ಉತ್ತರಪ್ರದೇಶ ಸರ್ಕಾರ, ಅಕ್ರಮ ಮದ್ಯ ಮಾರಾಟ ದೃಢಪಟ್ಟಿಲ್ಲಿ ಅಂತಹವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದೆ.