ನವದೆಹಲಿ: ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಹೊರಡಿಸಿದ್ದ ಪೌರತ್ವ ಅಧಿಸೂಚನೆ ವಿರುದ್ಧ ಐಯುಎಂಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಸ್ಲಿಮೇತರರಿಗೆ ಪೌರತ್ವ ನೀಡುವ ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಭಾರತೀಯ ಮುಸ್ಲಿಂ ಲೀಗ್ ಒಕ್ಕೂಟ ಸುಪ್ರೀಂಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸಿದೆ.
ಕಳೆದ ಶುಕ್ರವಾರ ಕೇಂದ್ರ ಗೃಹ ಸಚಿವಾಲಯ, ಭಾರತದಲ್ಲಿ ವಾಸವಿರುವ, ಬಾಂಗ್ಲಾದೇಶ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸೇರಿದ ನಿರಾಶ್ರಿತ ಮುಸ್ಲಿಮೇತರ ಧರ್ಮದವರಿಂದ ಭಾರತದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿತ್ತು.
ಧರ್ಮದ ಆಧಾರದಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರನ ವರ್ಗೀಕರಣ ಮಾಡಲಾಗಿದೆ. ಪೌರತ್ವ ಕಾಯ್ದೆ ನಿಯಮದಡಿ ಇದಕ್ಕೆ ಅವಕಾಶವಿಲ್ಲ. ಅದಲ್ಲದೆ 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೆಲವು ಪ್ರಕರಣಗಳು ಇನ್ನು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಹೀಗಿರುವಾಗ ಕೇಂದ್ರ ಗೃಹ ಸಚಿವಾಲಯದ ಈ ನಡೆ ಸರಿಯಲ್ಲ ಎಂದು ಮುಸ್ಲಿಂ ಲೀಗ್ ಪ್ರತಿಪಾದಿಸಿದೆ. ಇನ್ನು 2019ರ ಪೌರತ್ವ ತಿದ್ದುಪಡಿ ಕಾಯ್ದೆಗೂ ಶುಕ್ರವಾರ ಹೊರಡಿಸಿರುವ ಅಧಿಸೂಚನೆ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು.