ಮಂಗಳೂರು: ತುಳು ಭಾಷೆಯು ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ, ದೇಶದ ಸಂಸ್ಕೃತಿಯ ಅವನತಿಯಿದ್ದಂತೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಾನು ಮುಂದೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಆನ್ಲೈನ್ ವೇದಿಕೆ ಮೂಲಕ ನಡೆದ, ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ 52ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಮಾತನಾಡುತ್ತಾ, ‘ಜಾಗತೀಕರಣದ ಪ್ರಭಾವದಿಂದ ತುಳು ಸೇರಿದಂತೆ ಹಲವು ಭಾಷೆಗಳು ನಲುಗುತ್ತಿವೆ. ಭಾಷೆಯ ಅಳಿವು– ಉಳಿವು ಬಳಸುವವರ ಕೈಯಲ್ಲಿದೆ. ತುಳು ಭಾಷೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕಿದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ‘ಕನ್ನಡ ಮಾಧ್ಯಮಕ್ಕೆ ತುಳುವರ ಕೊಡುಗೆ ಅಪಾರ. ಭಾಷಾ ಶುದ್ಧತೆ, ತುಡಿತ, ಪ್ರಾಮಾಣಿಕತೆ, ಶ್ರಮ, ತಾಳ್ಮೆ, ಕಷ್ಟವನ್ನು ಎದುರಿಸಿ ಗೆದ್ದು ಬರುವ ಗುಣವನ್ನು ನಮ್ಮ ಮಣ್ಣು ಕಲಿಸಿದೆ. ಆದರೆ, ಈಗ ಮಾಧ್ಯಮದಲ್ಲಿ ರಾಜಕೀಯ ಪ್ರವೇಶದಿಂದ ತುಳು ಪ್ರತಿಭೆಗಳು ಅವಕಾಶ ಕಳೆದುಕೊಳ್ಳುತ್ತಿರುವುದು ಬೇಸರದ ವಿಚಾರ’ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿದ್ದರು.