ಮಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಗತ್ಯ ಸಭೆ ನಡೆಸಲು ಅಗತ್ಯ ಸಚಿವರುಗಳು ಮತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ಇಲ್ಲೊಬ್ಬ ಸಂಸದರು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ತಮ್ಮದೇ ಸರ್ಕಾರದ ನಿಯಮ ಮೀರಿ ಜನ ಸೇರಿಸಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸಿರುವ ಘಟನೆ ನಡೆದಿದೆ. ಹೇಳಿ ಕೇಳಿ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು, ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್. ಇವ್ರು ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ ನರೇಂದ್ರ ಮೋದಿ ಆಡಳಿತ ಏಳು ವರ್ಷ ಪೂರೈಸಿದ ಸಂಭ್ರಮಾಚರಣೆ ನಡೆಸಿದ್ದು ಇದೀಗ ಸುದ್ದಿಯಾಗಿರುವ ಜೊತೆಗೆ ಸಂಸದರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಮಂಗಳೂರು ನಗರದ ಉರ್ವಾ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ ಪಕ್ಷದ ಹಲವಾರು ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಸೇರಿಸಿಕೊಂಡು ನಡೆಸಿದ ಕಾರ್ಯಕ್ರಮದಲ್ಲಿ ಅಗತ್ಯ ಸಾಮಾಜಿಕ ಅಂತರವಿಲ್ಲದಿರುವುದು ಕಂಡುಬಂದಿದೆ. ಇನ್ನು ಈಗ ಬೆರಳೆಣಿಕೆ ಜನ ಸೇರಿಸಿ ಸಣ್ಣ ಕಾರ್ಯಕ್ರಮ ನಡೆಸುವುದಕ್ಕೂ ಕಠಿಣ ನಿರ್ಬಂಧಗಳಿರುವ ನಡುವೆಯೂ ಸಂಸದರಿಗೆ ಪಕ್ಷದ ಕಾರ್ಯಕ್ರಮ ಆಚರಿಸಲು, ಅದೂ ಸರ್ಕಾರಿ ಶಾಲೆಯಲ್ಲಿ ಅನುಮತಿ ನೀಡಿರುವುದಾದರೂ ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಂದು ಒಂದು ಪಕ್ಷದ ಕಾರ್ಯಕ್ರಮಕ್ಕೆ ಶಾಲೆ ನೀಡಿದ ಆಡಳಿತ ಮಂಡಳಿ ನಾಳೆ ಇನ್ನೊಂದು ಪಕ್ಷದ ಕಾರ್ಯಕ್ರಮಕ್ಕೆ ಶಾಲೆ ನೀಡಲಿಕ್ಕಿಲ್ಲ ಎಂಬುದು ಯಾವ ಗ್ಯಾರಂಟಿ ಎಂದು ಜನ ಆಕ್ರೋಶಿತರಾಗಿದ್ದಾರೆ.

ಇನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ತಪ್ಪದೇ ಸಾಮಾಜಿಕ ಅಂತರ ಪಾಲಿಸಿ ಎಂದು ಕರೆ ನೀಡುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಅಗತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗ, ಸಾರ್ವಜನಿಕರ ಹಿತ ಕಾಯುವ ಅದೂ ಆರೋಗ್ಯ ಸಿಬ್ಬಂದಿಯನ್ನು ಸಾಮಾಜಿಕ ಅಂತರವಿಲ್ಲದೆ ಸನ್ಮಾನಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಲ್ಲೂ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ಕೊರೊನ ದಿನೇದಿನೇ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಸಿಕ್ಕಸಿಕ್ಕವರನ್ನು ಆಪೋಷನ ತೆಗೆದುಕೊಳ್ತಿರುವಾಗ ಸಂಸದರೇ ನಿಮಗೆ ಯಾವ ಆತುರವಿತ್ತು ಈ ಕಾರ್ಯಕ್ರಮ ನಡೆಸುವುದಕ್ಕೆ? ಯಾರು ನಿಮಗೆ ಕಾರ್ಯಕ್ರಮ ನಡೆಸಲೇಬೇಕೆಂದವರು? ಎಂದು ಜನ ಕೇಳ್ತಿದಾರೆ.