ಬೆಂಗಳೂರು: ಅತ್ಯಾಚಾರ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಗಿದ್ದಾಗ, ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದು ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಇಂದು ಬೆಳಿಗ್ಗೆ ರಾಜಧಾನಿಯ ಚನ್ನಸಂದ್ರದಲ್ಲಿ ನಡೆದಿದೆ.
ನಿರ್ಭಯಾ ರೀತಿಯ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಇತರೆ ಇಬ್ಬರು ಯುವತಿಯರ ಸಹಾಯದಿಂದ ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟಲ್ ಇರಿಸಿ ವಿಕೃತಿ ಮರೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಇಂದು ಅತ್ಯಾಚಾರ ಮಾಡಿದ ಸ್ಥಳ ಪರಿಶೀಲನೆಗೆ ಆರೋಪಿಗಳಾದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಅವರನ್ನು ಕರೆದುಕೊಂಡು ಹೋದಾಗ, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ನಂತರ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಆರೋಪಿಗಳು 10 ದಿನಗಳ ಹಿಂದೆ ಮಾಡಿ ಅತ್ಯಾಚಾರದ ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ವಿಚಾರಣೆ ವೇಳೆ ನಾಲ್ವರು ಕಾಮುಕ ಆರೋಪಿಗಳಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೊಳಗಾದ ಯುವತಿ ಸೇರಿದಂತೆ ಆರೋಪಿಗಳೆಲ್ಲರೂ ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಯುವತಿ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್ಆರ್ಐ ಲೇಔಟ್ನಲ್ಲಿ ವಾಸವಾಗಿದ್ದರು. ಜೊತೆಗೆ ವೇಶ್ಯಾವಾಟಿಕೆಯಲ್ಲೂ ತೊಡಗಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಯುವತಿಯನ್ನು ಅತ್ಯಾಚಾರಗೈದ ವಿಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.