ದುಬೈ: ಹೆಚ್ಚಿನ ಮಹಿಳೆಯರಿಗೆ ತಮ್ಮ ಪತಿಯ ಮೊಬೈಲನ್ನು ಚೆಕ್ಕಿಂಗ್ ಮಾಡುವ ಅಭ್ಯಾಸ ಇರುತ್ತದೆ. ಅಂತಹವರಿಗೆ ಈ ವರದಿ ಎಚ್ಚರಿಕೆ ಘಂಟೆಯಾದಂತಿದೆ. ಹೌದು, ಇಲ್ಲೊಬ್ಬ ಮಹಿಳೆ ಗಂಡನ ವಿರುದ್ಧವೇ ಗೂಢಚರ್ಯೆ ಮಾಡುತ್ತಾ ಆತನ ಮೊಬೈಲ್ ಅನ್ನು ಕದ್ದು-ಮುಚ್ಚಿ ನೋಡಿ ಅದರಲ್ಲಿದ್ದ ಖಾಸಗಿ ವಿಚಾರಗಳನ್ನ ಬಹಿರಂಗ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಈ ಘಟನೆ ದುಬೈನ ರಾಸ್ ಅಲ್ ಖೈಮಾದಲ್ಲಿ ನಡೆದಿದ್ದು, ಗಂಡನ ಮೊಬೈಲ್ ಚೆಕ್ ಮಾಡಿ ಆತನ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ ಅಲ್ಲಿನ ಸಿವಿಲ್ ಕೋರ್ಟ್ 5,400 ದಿರಾಮ್ (ಭಾರತದ ರೂಪಾಯಿ ಲೆಕ್ಕದಲ್ಲಿ 1 ಲಕ್ಷ ರೂಪಾಯಿ) ದಂಡ ವಿಧಿಸಿ ಆದೇಶಿಸಿದೆ. ಸಂಸಾರದಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟರೆ ಏನೇಲ್ಲಾ ಆಗಬಹುದು ಎಂಬುದಕ್ಕೆ ಈ ಪ್ರಕರಣ ನಿದರ್ಶಶನವಾಗಿದೆ.
ನನ್ನ ಮೇಲೆ ಅನುಮಾನವಿದ್ದ ಪತ್ನಿ, ನನ್ನ ಮರ್ಯಾದೆ ಕಳೆಯಲೆಂದು ಮೊಬೈಲ್ ಚೆಕ್ ಮಾಡಿ ಕೆಲವು ಫೋಟೋ ಮತ್ತು ಆಡಿಯೋ ತುಣುಕನ್ನು ಕುಟುಂಬಸ್ಥರಿಗೆ ಫಾರ್ವರ್ಡ್ ಮಾಡಿ ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದಿದ್ದಾಳೆ. ನನಗೆ ಮಾನಹಾನಿ ಆಗಿದೆ. ಆಕೆಯಿಂದ ಪರಿಹಾರ ಕೊಡಿಸಿ ಎಂದು ಗಂಡ ಕೋರ್ಟ್ ಮೆಟ್ಟಿಲೇರಿದ್ದ. ವಾದ-ವಿವಾದ ಆಲಿಸಿದ ಬಳಿಕ ಪತ್ನಿಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಗಂಡನಿಗೆ ಮಾನಹಾನಿ ಪರಿಹಾರ ಹಣ ಪಾವತಿಸುವಂತೆ ಆಕೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.