ಚೆನ್ನೈ: ಕೊರೊನಾ ಸೋಂಕು ತಗಲಬಹುದು ಎಂದು ಸರಕಾರ ಹೋರಾಡುತ್ತಿರುವ ಬೆನ್ನಲ್ಲಿ ಹಲವು ಮಂದಿ ತಮ್ಮ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಹೊಸ ಹೊಸ ಅನ್ವೇಷಣೆಗಳು ಸಹ ನಡೆಯುತ್ತಿವೆ. ಇದೇ ಉದ್ದೇಶದಿಂದ ಹಾವೊಂದನ್ನು ತಿಂದ ತಮಿಳುನಾಡಿನ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತನೇ ಹಾವು ತಿಂದ ಭೂಪ. ತಾನು ಹಾವು ತಿನ್ನುವುದನ್ನು ವಿಡಿಯೋ ಮಾಡಿಸಿರುವ ಈತ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಸರ ಪ್ರೇಮಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಡಿವೇಲ್ ನನ್ನು ಬಂಧಿಸಿದ್ದು, 7500 ರೂ. ದಂಡ ವಿಧಿಸಿದ್ದಾರೆ. ಈತ ತನ್ನ ಗದ್ದೆಯಲ್ಲಿ ಸಿಕ್ಕ ಹಾವನ್ನು ಹಿಡಿದಿದ್ದಾನೆ. ಹಾವನ್ನು ಕೊಂದು ನಂತರ ಅದನ್ನು ತಿಂದಿದ್ದಾನೆ. ಕೋವಿಡ್ ವೈರಸ್ ನ್ನು ದೂರವಿಡಲು ಸರಿಸೃಪಗಳ ಭಕ್ಷಣೆ ಉತ್ತಮ ಎಂದು ವಡಿವೇಲ್ ವಿಡಿಯೋದಲ್ಲಿ ಹೇಳಿದ್ದಾನೆ.
ಒಟ್ಟಿನಲ್ಲಿ ಈತನ ಈ ಪ್ರಯತ್ನವು ಉರಗ ತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ.