ಮಂಗಳೂರು. ಮೇ.27: ಕೊರೊನಾ ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕಾಸಿಲ್ದೇ ಜನ ಪರದಾಡ್ತಿದಾರೆ. ಅದರಲ್ಲೂ ದೂರದೂರಿಗೆ ಸರಕು ಸರಂಜಾಮು ಸಾಗಿಸುವ ಲಾರಿ ಚಾಲಕರಂತೂ ಒಂದೊಂದು ಪೈಸೆಗೂ ಕಷ್ಟ ಪಡ್ತಾ ಇದ್ದು, ಹೊಟೇಲುಗಳು, ಡಾಬಾಗಳು ಮುಚ್ಚಿರುವಾಗ ಹೆಚ್ಚು ಹಣ ಕೊಟ್ಟು, ಹೊಟೇಲುಗಳಿಂದ ಪಾರ್ಸೆಲ್ ತಗೊಂಡು ಉಣ್ಣಬೇಕು. ಆದ್ರೆ ನಮ್ಮ ಕೆಲವು ಅಧಿಕಾರಿವರ್ಗದವ್ರಿಗೆ ಜನಸಾಮಾನ್ಯರ ಕಷ್ಟಕೋಟಲೆ ಗೊತ್ತಾಗ್ತಾನೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆ ದ.ಕ ಮತ್ತು ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಪಾಜೆ ಚೆಕ್ ಫೋಸ್ಟ್ ನಲ್ಲಿನ ಅರಣ್ಯಾಧಿಕಾರಿ.
ಈ ಚೆಕ್ ಪೋಸ್ಟ್ ಮೂಲಕ ಹಾದುಹೋಗುವ ಪ್ರತೀ ಟಿಂಬರ್ ಗಾಡಿಗಳು ಈತನಿಗೆ ಮಾಮೂಲಿ ಕೊಡ್ಲೇಬೇಕು. ಎಲ್ಲಾ ದಾಖಲೆಗಳು ಸರಿ ಇದ್ರೂ ಈತನ ಮಾಮುಲಿ ದಾಹ ತೀರೋದೇ ಇಲ್ಲ. ಪ್ರತೀ ಲೋಡ್ ಲಾರಿಗಳಿಂದ ಮಿನಿಮಮ್ 500 ರೂ ದೋಚುವ ಈತನ ಈ ಕೃತ್ಯವನ್ನು ನೋಡಿ ಸಾಕಾಗಿರುವ ಲಾರಿಯವ್ರು ಈತನ ಲಂಚಬಾಕತನದ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದೀಗ ವೈರಲ್ ಆಗಿದೆ.
ಈತನಿಗೆ ಲಾರಿಲೋಡ್ ಹೋಗುವಾಗ ಎಲ್ಲಾ ದಾಖಲೆಗಳನ್ನು ಒರಿಜಿನಲ್ ಆಗಿಯೇ ನೀಡಬೇಕಂತೆ. ಒಂದು ವೇಳೆ ಒರಿಜಿನಲ್ ದಾಖಲೆ ನೀಡದೇ ಇದ್ದರೆ ಈ ಚೆಕ್ ಪೋಸ್ಟ್ ನಲ್ಲಿ ಫೈನ್ ಕಟ್ಟಬೇಕಂತೆ. ಅಂದಹಾಗೆ ಈತನ ಫೈನ್ ಗೆ ಯಾವುದೇ ರಶೀದಿ ನೀಡೋದಿಲ್ಲ. ಎಲ್ಲವೂ ಈತನ ಕಿಸೆ ಸೇರುತ್ತದೆ. ಇನ್ನೂ ಈತನಿಂದ ಯಾರಿಗೆಲ್ಲ ಹಣ ಸೇರುತ್ತದೆ ಎಂಬುದು ಗೊತ್ತಾಗ್ತಿಲ್ಲ. ಮೇಲಿನ ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರಾ ಅಥವಾ ಇನ್ನಾದರೂ ಈತನ ಮೇಲೆ ಕ್ರಮ ಕೈಗೊಳ್ತಾರಾ ಕಾದುನೋಡಬೇಕಿದೆ.