ಸಾವಿನ ಲೆಕ್ಕಾಚಾರದಲ್ಲೂ ರಾಷ್ಟ್ರಗಳು ತಪ್ಪು ಲೆಕ್ಕಾಚಾರ ಕೊಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥ ಶಂಕೆ ವ್ಯಕ್ತಪಡಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಅಂಕಿ-ಸಂಖ್ಯೆಯ ಕುರಿತು ನೀಡಲಾಗುತ್ತಿರುವ ಅಧಿಕೃತ ಸಾವಿನ ಪ್ರಮಾಣವನ್ನು ವಾಸ್ತವಕ್ಕಿಂತ ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂದಾಜು 80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ನೀಡಲಾದ ಮಾಹಿತಿ ಅದರ ಶೇಖಡಾ 50 ಕ್ಕಿಂತಲೂ ಕಡಿಮೆ ಇದೆ ಎಂದಿದೆ.
ಕಳೆದೊಂದು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕದಿಂದ ಈವರೆಗೆ ವಿಶ್ವದಾದ್ಯಂತ ಅಧಿಕೃತವಾಗಿ 34 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಆದರೆ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಲು ತಯಾರಿಲ್ಲ. ಸಾವಿನ ಸಂಖ್ಯೆಯನ್ನು ಕೆಲವು ರಾಷ್ಟ್ರಗಳು ಅತಿಯಾಗಿ ಕಡಿಮೆ ಮಾಡಿ ವರದಿ ನೀಡಿದೆ ಎಂದು ಗರಂ ಆಗಿದೆ. ದೇಶಗಳು ನೀಡಿದ ವರದಿ ಪ್ರಕಾರ 2020 ರಲ್ಲಿ ಕೋವಿಡ್ ನಿಂದ ಅಧಿಕೃತವಾಗಿ 18 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಆ ವರ್ಷದಲ್ಲಿ 30 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿದೆ.
ವರದಿ ನೀಡಿದ ಒಟ್ಟಾರೆ ಸಾವಿನ ಪ್ರಮಾಣಕ್ಕಿಂತ ಕನಿಷ್ಠ ಪಕ್ಷ ಮೂರು ಪಟ್ಟು ಅಧಿಕ ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶದ ಸಹಾಯಕ ಮಹಾ ನಿರ್ದೇಶಕಿ ಸಮೀರಾ ಅಸ್ಮಾ ಆಘಾತಕಾರಿ ಅಂಶವನ್ನು ಹೊರಹಾಕಿದ್ದಾರೆ.