ಸಚಿವರೆಂದರೆ ಸಾಮಾನ್ಯವಾಗಿ ಅಧಿಕಾರಿ ವರ್ಗದವರು ಮಾತನಾಡಲೂ ಭಯಪಡುತ್ತಾರೆ. ಆದರೆ ಇಲ್ಲೊಬ್ಬ ಪಿಡಿಒ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದಲ್ಲದೆ ಸಚಿವರಿಗೇ ಕಾನೂನು ಪಾಠ ಮಾಡಿದ ಘಟನೆ ನಡೆದಿದೆ. ಪಿಡಿಒ ರಿಂದ ಪಾಠ ಹೇಳಿಸಿಕೊಂಡ ಸಚಿವರು ಬುದ್ದಿಮಾತು ಹೇಳಿ ಕಳಿಸಿದ ಸ್ವಾರಸ್ಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ದ.ಕ ಜಿಲ್ಲೆಯ ಕಂದಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಶವಂತರವರು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಫೋನ್ ಮಾಡಿ ಕೋವಿಡ್ ಕಿಟ್ ವಿತರಣೆ ವಿಚಾರದಲ್ಲಿ ಚರ್ಚೆ ಮಾಡಿದ್ದಲ್ಲದೇ, ವಾಗ್ವಾದ ನಡೆಸಿದ ಆಡಿಯೋ ವೈರಲ್ ಆಗಿದೆ. ಸಚಿವರಿಗೆ ಕಾನೂನು ಪಾಠ ಹೇಳಿದ ಯಶವಂತರವರು ಈಗ ಸುದ್ದಿಯಾಗಿದ್ದಾರೆ.
ಆಹಾರ ಕಿಟ್ ವಿತರಣೆಯಲ್ಲಿ ಸರಕಾರದ ನಿರ್ದೇಶನವಿದೆ. ಆದರೂ ನಿಮ್ಮಲ್ಲಿ ಹಣ ಇಲ್ಲ ಎಂದು ಹೇಳುತ್ತಿರಲ್ಲಾ ಎಂದು ಸಚಿವರು ಪಿಡಿಒರನ್ನು ಕೇಳಿದ್ದಾರೆ. ಅಷ್ಟಕ್ಕೆ ಪಿಡಿಒ ಯಶವಂತ್ ಕಾನೂನು ಕಟ್ಟಳೆಗಳ ಕುರಿತು ವಿವರಿಸಿದ್ದಾರೆ. ಕಿಟ್ ಎಷ್ಟು ಕೊಡಬೇಕು? ಕೊಟೇಶನ್ ಪಡೆಯಬೇಕೇ? ಲಕ್ಷ ಮೀರಿದರೆ ಟೆಂಡರ್ ಕರೆಯಬೇಕೆಂಬ ನಿಯಮ ಇದೆ. ಈ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲದೇ ಹೇಗೆ ಕೆಲಸ ಮಾಡುವುದು? ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.
ಅದಕ್ಕೆ ಸಚಿವರು ಬೇರೆ ಪಂಚಾಯತ್ ನಲ್ಲಿ ಹೇಗೆ ಮಾಡಿದ್ದಾರೋ ಹಾಗೆ ಮಾಡಿ ಎಂದು ಹೇಳಿದಾಗ ಮತ್ತೆ ಪಿಡಿಒ ಕಾನೂನಿನ ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಸಚಿವರು ನಿಮಗ್ಯಾರು ಹೇಳೋದು ಅಂತ ಹೇಳಿ ಕರೆ ಕಡಿತಮಾಡಿದ್ದಾರೆ.
ತಳಮಟ್ಟದ ಅಧಿಕಾರಿಯೊಬ್ಬ ಉಸ್ತುವಾರಿ ಸಚಿವರೊಂದಿಗೆ ಬೇಕಾಬಿಟ್ಟಿ ಮಾತನಾಡಿದರೂ ಸಮಾಧಾನದಿಂದ ಉತ್ತರಿಸಿದ ಸಚಿವರ ಔದಾರ್ಯದ ಕುರಿತು ಜನರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಪಿಡಿಒ ಅವರ ಉದ್ದಟತನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ನಡುವೆ ಸಚಿವರೊಂದಿಗೆ ಯರ್ರಾಬಿರ್ರಿ ಮಾತನಾಡಿರುವ ಬಗ್ಗೆ ಜಿ.ಪಂ ಸಿಇಒ ಗಮನಕ್ಕೆ ಬಂದಿದ್ದು, ಸಿಇಓ ಕುಮಾರ್ ಪಿಡಿಒ ರನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮಂಗಳವಾರ ಜಿ.ಪಂ ಕಚೇರಿಯಲ್ಲಿ ನಡೆದ ಸಭೆಗೆ ಆಗಮಿಸಿದ ಸಚಿವರ ಬಳಿ ಪಿಡಿಒ ರಿಂದ ಕ್ಷಮಾಪಣೆ ಕೇಳಿಸಿದ್ದಾರೆ.
ಕೋಟರವರ ಜಾಗದಲ್ಲಿ ಬೇರೆ ಯಾವ ಜನಪ್ರತಿನಿಧಿ ಇದ್ದರೂ ಪಿಡಿಒ ಕೆಲಸ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಶಾಂತಮೂರ್ತಿ ಸಚಿವರು ಸಮಾಧಾನದಿಂದ ಬುದ್ದಿ ಹೇಳಿ ಕಳಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.