ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಲಾಗದ ಬೆಳವಣಿಗೆಗಳು ಗರಿಗೆದರುತ್ತಿದ್ದು ಮತ್ತೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಕುರಿತು ಆಲೋಚಿಸುತ್ತಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನ ಕದ ತಟ್ಟಿದ್ದು, ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಈಗಾಗಲೇ ಕೆಲ ಪ್ರಭಾವಿ ನಾಯಕರು ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ದೆಹಲಿಯಲ್ಲಿ ಝಂಡಾ ಹೂಡಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಿದ್ದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ತಂತ್ರಗಳನ್ನು ರೂಪಿಸುತ್ತಿರುವುದಾಗಿ ಹೇಳಲಾಗುತ್ತಿದೆ.
ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಆ ರಾಜ್ಯಗಳ ಮುಖ್ಯಮಂತ್ರಿಗಳು ಪದತ್ಯಾಗ ಮಾಡಿದ್ದು, ಇದೇ ರಣತಂತ್ರವನ್ನು ರಾಜ್ಯದಲ್ಲೂ ಜಾರಿಗೆ ತರಲು ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಆದರೆ ಸಿಎಂ ಯಡಿಯೂರಪ್ಪ ಈ ಬೆಳವಣಿಗೆಗೆ ಸೊಪ್ಪು ಹಾಕದೇ ಇರುವ ಕಾರಣ ಕಾರ್ಯತಂತ್ರಗಳು ಬಿರುಸಾಗಿವೆ. ಯಡಿಯೂರಪ್ಪ ಅವರು ತಮ್ಮ ಹಠಮಾರಿತನ ಮುಂದುವರೆಸಿದಲ್ಲಿ, ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಕಾ ಎನ್ನಲಾಗುತ್ತಿದೆ. ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದು, ಕ್ಷಿಪ್ರ ಬೆಳವಣಿಗೆ ನಡೆದರೆ ಮೈತ್ರಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಲು ಒಪ್ಪಿಕೊಂಡಿದ್ದಾರಂತೆ.
ಈ ನಡುವೆ ಕೆಲ ನಾಯಕರಿಗೆ ದೆಹಲಿಯಲ್ಲಿ ಪ್ರಮುಖರ ಭೇಟಿಗೆ ಅವಕಾಶ ಸಿಗದೇ ವಾಪಾಸ್ಸಾಗಿರುವುದು ಕೂಡಾ ಸತ್ಯ.
ಯಡಿಯೂರಪ್ಪರವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಪಕ್ಷದ ನಿಯಮಗಳ ಪ್ರಕಾರ ಅಸಾಧ್ಯವಾಗಿದ್ದು, ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ಇರಾದೆ ಬಿಜೆಪಿಯದ್ದು. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಏನಾಗುತ್ತೋ ಅನ್ನೋದನ್ನ ಕಾದುನೋಡಬೇಕಿದೆ.