ಕಡೂರು: ಲಾಕ್ಡೌನ್ ನಡುವೆ ನಡೆಯುತ್ತಿದ್ದ ಅದ್ಧೂರಿ ಮದುವೆಗೆ ದಾಳಿ ನಡೆದಿದ್ದು, ಅಧಿಕಾರಿಗಳನ್ನು ನೋಡಿದ ವರ ವಧುವನ್ನು ಮಂಟಪದಲ್ಲಿಯೇ ಬಿಟ್ಟು ಪರಾರಿಯಾದ ಪ್ರಸಂಗ ತಾಲೂಕಿನ ಕರಿಕಲ್ಲಳ್ಳಿಯಲ್ಲಿ ನಡೆದಿದೆ.
ಕೋವಿಡ್ ಹರಡುವಿಕೆ ತಡೆಯುವ ಹಿನ್ನಲೆಯಲ್ಲಿ ಹೇರಿದ್ದ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಶಾಸ್ತ್ರೊತ್ತರಗಳು ಸರಾಗವಾಗಿ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಧಿಕಾರಿಗಳನ್ನು ನೋಡುತ್ತಲೇ ವರ ಸೇರಿದಂತೆ ಜನರು ಸ್ಥಳದಿಂದ ತೆರಳಿದ್ದಾರೆ.
ಮದುವೆಗೆ ಕೇವಲ 10 ಜನರಿಗೆ ಅನುಮತಿ ಪಡೆದು ನೂರಾರು ಜನರನ್ನು ಸೇರಿಸಲಾಗಿತ್ತು. ಸ್ಥಳಕ್ಕೆ ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿದ್ದು, ಅಧಿಕಾರಿಗಳನ್ನು ಗುರುತಿಸುತ್ತಿದ್ದಂತೆ ವರ ಹಾಗೂ ಜನರು ಭರ್ಜರಿ ಭೋಜನವನ್ನೂ ಬಿಟ್ಟು ಪರಾರಿಯಾಗಿದ್ದಾರೆ.