ಮೈಸೂರು: ಮುಂದಿನ ದಿನಗಳಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್ಫೋನ್ ನೀಡಲು ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೊರೋನಾ ಹೋಗಲಾಡಿಸಲು ಲಾಕ್ಡೌನ್ ಹೇರಿದ ನಂತರ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದು ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡಲಾಗುತ್ತಿದೆ. ಈ ಪದ್ಧತಿ ಕೆಲವೆಡೆ ಸರಾಗವಾಗಿ ನಡೆಯುತ್ತಿದ್ದರೂ ಹಲವೆಡೆ, ಅದರಲ್ಲಿಯೂ ಸರಕಾರಿ ಶಾಲಾ ಮಕ್ಕಳು ಸೂಕ್ತ ಮೊಬೈಲ್ ಅಥವಾ ನೆಟ್ವರ್ಕ್ ಕೊರತೆಯಿಂದ ಆನ್ಲೈನ್ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಆ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಮೈಸೂರಿನ ಡಿಡಿಪಿಐ ಕಚೇರಿಗೆ ದಿಢೀರ್ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲಿ ಶೈಕ್ಷಣಿಕ ಸರ್ವೆ ನಡೆಸಲಾಗಿದೆ ಹಾಗೂ ಪ್ರಸ್ತುತ ಆನ್ಲೈನ್ ಶಿಕ್ಷಣ, ಮಕ್ಕಳ ಹಾಜರಾತಿ ಮತ್ತು ಸ್ಮಾರ್ಟ್ಫೋನ್ ಅಗತ್ಯತೆ ಬಗ್ಗೆ ಬಗ್ಗೆ ತಕ್ಷಣವೇ ವರದಿ ನೀಡಲು ಎಲ್ಲಾ ಜಿಲ್ಲಾ ಡಿಡಿಪಿಐ ಕಚೇರಿಗಳಿಗೆ ಸೂಚಿಸಲಾಗಿದೆ ಎಂದಿರುವ ಶಿಕ್ಷಣ ಸಚಿವರು, ಎಲ್ಲಾ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಸಚಿವರು ಕಳಕಳಿ ವ್ಯಕ್ತಪಡಿಸಿದ್ದಾರೆ.