ಕೊಲ್ಕತ್ತಾ: “ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯ ಕಳೆದ ಕೆಲ ಪಂದ್ಯಗಳಲ್ಲಿ ರಿಷಬ್ ಪಂತ್ ಅಮೋಘ ಆಟವಾಡಿದ್ದಾರೆ . ಹೀಗಾಗಿ ಮುಂಬರುವ ಉಧ್ಟಾಟನಾ ಆವೃತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲೂ ಅವರೇ ನನ್ನ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್” ಎಂದಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಮಾತಿಗೆ ಕ್ರಿಕೆಟ್ ವಲಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಪೋರ್ಟ್ಸ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ್ದ ವೃದ್ಧಿಮಾನ್, ನಾನಿನ್ನು ಅವಕಾಶಕ್ಕಾಗಿ ಕಾಯುತ್ತೇನೆ, ಅವಕಾಶ ಸಿಕ್ಕಾಗ ನನ್ನ ಶ್ರೇಷ್ಠ ಪ್ರದರ್ಶನ ನೀಡುವ ಪ್ರಯತ್ನ ಮಾಡುತ್ತೇನೆ. ಪ್ರತಿದಿನ ಕಠಿಣ ಅಭ್ಯಾಸ ಮಾಡಲಿದ್ದೇನೆ” ಎಂದು ಸಹಾ ನಿಸ್ವಾರ್ಥವಾಗಿ ಹೇಳಿಕೊಂಡಿದ್ದರು.
ಇದೀಗ 23 ವರ್ಷದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬಗ್ಗೆ, 36 ವರ್ಷದ ಅನುಭವಿ ವಿಕೆಟ್ ಕೀಪರ್ ಆಡಿರುವ ನಿಸ್ವಾರ್ಥತೆಯ ಮಾತನ್ನು ಕ್ರಿಕೆಟ್ ವಲಯ ಕೊಂಡಾಡುತ್ತಿದ್ದು, ಪಾಕಿಸ್ತಾನದ ಮಾಜಿ ಬ್ಯಾಟ್ಸ್ ಮನ್ ಸಲ್ಮಾನ್ ಬಟ್ ” ನೀವು ನಿಜವಾದ ವೃತ್ತಿಪರ ಕ್ರೀಡಾಪಟು, ಆದ್ದರಿಂದ ಮಾತ್ರ ಇಂತಹ ಮಾತುಗಳು ನಿಮ್ಮಿಂದ ಬರುತ್ತವೆ. ಇದು ಸುಲಭವಾದ ವಿಷಯವಲ್ಲ . ಹ್ಯಾಟ್ಸ್ ಆಫ್ ಟು ವೃದ್ಧಿಮಾನ್ ಸಹಾ. ಅವರು ಏನೆಂಬುದು ನನಗೆ ಗೊತ್ತು. ನಾವಿಬ್ಬರೂ ಉದ್ಘಾಟನಾ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದೆವು. ಅವರು ಎಲ್ಲರಿಗೂ ಲಭ್ಯರಾಗುವ ವ್ಯಕ್ತಿ. ಹಾಗಾಗಿ ಅವರು ಈ ರೀತಿ ಹೇಳಿದ್ದಾರೆ” ಎಂದು ಬಟ್, ಸಹಾ ಗುಣಗಾನ ಮಾಡಿದ್ದಾರೆ.
ಇದಲ್ಲದೆ ಇತರ ಮಾಜಿ ಕ್ರಿಕೆಟಿಗರು ಹಾಗು ಅಭಿಮಾನಿಗಳು ಅವರ ಮಾತಿಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.
ಎಂಎಸ್ ಧೋನಿ 2014 ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಹಠಾತ್ ನಿವೃತ್ತಿ ಘೋಷಿಸಿದ್ದರು. ಬಳಿಕ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಥಾನ ಖಾತ್ರಿಗೊಳಿಸಿಕೊಂಡಿದ್ದ ವೃದ್ಧಿಮಾನ್ ಸಹಾಗೆ ಈಗ ರಿಷಭ್ ಪಂತ್ ಪ್ರತಿಸ್ಪರ್ಧಿಯಾಗಿ ಉದಯಿಸಿದ್ದಾರೆ. ಕೇವಲ ಕೀಪಿಂಗ್ ವಿಚಾರದಲ್ಲಿ ವೃದ್ಧಿಮಾನ್ ಸಹಾ ಈಗಲೂ ಭಾರತದ ನಂ.1 ಕೀಪರ್. ಆದರೆ, ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಸೈ ಎನಿಸಿಕೊಂಡು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಿರುವ ಯುವ ಪ್ರತಿಭೆ ರಿಷಬ್ ಪಂತ್ ಈಗ ಭಾರತ ತಂಡಕ್ಕೆ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.