ಬೆಳಗಾವಿ: ಮಂಗಳೂರಿನಿಂದ ಬೆಳಗಾವಿಗೆ ಕಳ್ಳದಾರಿಯಲ್ಲಿ ರವಾನೆಯಾದ ಬರೋಬ್ಬರಿ 4.9 ಕೆಜಿ ಚಿನ್ನವನ್ನು ಬೆಳಗಾವಿ ಪೊಲೀಸರು ದೋಚಿದ ಘಟನೆ ನಾಲ್ಕು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದೀಗ ಸಿಐಡಿ ತನಿಖೆಗಾಗಿ ಮುನ್ನೆಲೆಗೆ ಬರುತ್ತಿದೆ.
ಜನವರಿ 9 ರಂದು ಮಂಗಳೂರಿನ ತಿಲಕ್ ಪೂಜಾರಿ ಎಂಬಾತ ಬೆಳಗಾವಿ ಜಿಲ್ಲೆಯ ಕೊಲ್ಲಾಪುರಕ್ಕೆ ತನ್ನ ಸಹಚರರ ನೆರವಿನಿಂದ ಕಾರಿನಲ್ಲಿ 4.9 ಕೆಜಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ತಿಲಕ್ ಗೆಳೆಯ, ಧಾರವಾಡ ಮೂಲದ ಕಿರಣ್ ವೀರನಗೌಡ ಎಂಬಾತ ಬೆಳಗಾವಿ ಡಿವೈಎಸ್ಪಿಗೆ ಮಾಹಿತಿ ನೀಡಿದ್ದಾನೆ. ಖಚಿತ ಮಾಹಿತಿ ದೊರೆತ ಬೆಳಗಾವಿ ಡಿವೈಎಸ್ಪಿ, ಯಮಕನಮರಡಿ ಪೊಲೀಸರಿಗೆ ಕಾರನ್ನು ವಶಪಡೆಯುವಂತೆ ತಿಳಿಸಿದ್ದರು. ಡಿವೈಎಸ್ಪಿ ನಿರ್ದೇಶನದಂತೆ ಹತ್ತರಗಿ ಚೆಕ್ ಪೋಸ್ಟ್ ನಲ್ಲಿ ಚಿನ್ನ ಸಾಗಾಟದ ಕಾರು ತಡೆದು ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಬಂಗಾರ ದೊರೆಯಲಿಲ್ಲ ಎನ್ನಲಾಗಿದ್ದು, ಆ ಕಾರಣಕ್ಕಾಗಿ ಆರೋಪಿಗಳು ಕಾರು ಬದಲಾವಣೆ ಮಾಡಿದ್ದಾರೆ ಎಂದು, ಮೋಟಾರು ಕಾಯ್ದೆ ಉಲ್ಲಂಘನೆ ಆರೋಪದಡಿ ಕಾರನ್ನು ಜಪ್ತಿ ಮಾಡಿದ್ದರು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಪೊಲೀಸರು ಅದೇ ಮಾಹಿತಿ ನೀಡಿದ್ದಾರೆ. ನಂತರ ವಶಪಡಿಸಿಕೊಂಡ ಕಾರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ನಂತರ ತಿಲಕ್ ನನ್ನು ಸಂಪರ್ಕಿಸಿದ ಗೆಳೆಯ ಕಿರಣ್ ಬೆಳಗಾವಿ ಪೋಲೀಸರ ಸಹಾಯದಿಂದ ಚಿನ್ನವಿರುವ ನಿನ್ನ ಕಾರನ್ನು ಬಿಡಿಸಿ ಕೊಡುತ್ತೇನೆ ಇಂದು ಬರೋಬ್ಬರಿ 60 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಅಷ್ಟೊಂದು ಮೊತ್ತಕ್ಕೆ ಒಪ್ಪದ ತಿಲಕ್ 30 ಲಕ್ಷ ಕೊಡುವುದಾಗಿ ಹೇಳಿದ್ದ, ಇದಕ್ಕೆ ಒಪ್ಪಿದ ಕಿರಣ್ 25ಲಕ್ಷ ರೂ ಪಡೆದುಕೊಂಡು ಬೆಳಗಾವಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಕಾರು ಹಿಂಪಡೆಯಲು ಪ್ರಯತ್ನಿಸಿದ್ದಾನೆ. ಇದರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಕಾರು ವಶಪಡಿಸಿಕೊಂಡ ಪಿಎಸ್ಐ ಗೆ ಪ್ರಕರಣ ಮುಚ್ಚಿಹಾಕುವಂತೆ ಒತ್ತಡ ಹೇರಿದ್ದಾರೆ. ಇದೆಲ್ಲದರ ನಡುವೆ ಕಿರಣ್ ಮತ್ತು ಡಿವೈಎಸ್ಪಿ ಸೇರಿ ಕಾರಿನ ಏರ್ ಬ್ಯಾಗ್ನಲ್ಲಿ ಅಡಗಿಸಿಟ್ಟಿದ್ದ ಚಿನ್ನವನ್ನು ದೋಚಿದ್ದಾರೆ.
ಗೆಳೆಯ ಕಿರಣನ ಮೇಲೆ ಸಂಶಯಗೊಂಡ ತಿಲಕ್ ನೇರವಾಗಿ ಬೆಳಗಾವಿ ನ್ಯಾಯಾಲಯಕ್ಕೆ ಕಾರು ಬಿಡಿಸಿಕೊಳ್ಳಲು ತೆರಳಿದ್ದು, ಈ ವೇಳೆ ಕಾರಿನಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನರಿತ ತಿಲಕ್ ಈ ಬಗ್ಗೆ ಐಜಿಪಿಗೆ ದೂರು ನೀಡಿದ್ದು, ಐಜಿಪಿ ಬೆಳಗಾವಿ ಜಿಲ್ಲಾ ಎಸ್ಪಿಗೆ ತನಿಖೆಗೆ ಆದೇಶಿಸಿದ್ದರು. ಎಸ್ಪಿ, ಅಡಿಷನಲ್ ಎಸ್ಪಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಿದಾಗ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿತ್ತು. ಇದೀಗ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿದೆ.
ಅದಾಗಲೇ ಕಾರ್ ವಶಪಡಿಸಿಕೊಂಡ ಯಮಕನಮರಡಿ ಪಿಎಸ್ಐ, ಗೋಕಾಕ ಡಿವೈಎಸ್ಪಿ, ಹುಕ್ಕೇರಿ ಸಿಪಿಐ ಹಾಗೂ ಐಜಿಪಿ ವರ್ಗಾವಣೆಗೊಂಡಿರುವುದು ಎಲ್ಲರೂ ಪ್ರಕರಣದ ಮೇಲೆ ಕುತೂಹಲದ ಕಣ್ಣಿಡುವಂತೆ ಮಾಡಿದೆ.