ಮಂಡ್ಯ.ಮೇ.23: ಈ ಮುದ್ದಾದ ಕಂದಮ್ಮನ ಹೆಸರು ಮನಸ್ವಿ. ಮಂಡ್ಯದ ದುದ್ದ ಹೋಬಳಿಯ ಹಾಡ್ಯ ಗ್ರಾಮದ ಹೆಚ್.ಡಿ ಸುಧಾಕರ್ ಎಂಬುವರ ಮಗಳು. ಈಕೆಗಿನ್ನೂ ಐದೂವರೆ ವರ್ಷ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಸುಧಾಕರ್ ಅವರಿಗೆ ಮಗಳ ಸಮಸ್ಯೆ ಎರಡೂವರೆ ತಿಂಗಳು ಇದ್ದಾಗಲೇ ಮನವರಿಕೆ ಆಗಿತ್ತು. ಅಂದಿನಿಂದ ಇಲ್ಲೀವರೆಗೂ ಮಗಳ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಸುಧಾಕರ್ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವಾರು ರೀತಿಯ ಕೆಲಸ ಮಾಡಿಕೊಂಡಿದ್ದರು. ಕಳೆದ 5 ವರ್ಷದಿಂದ ಕಾರು ಚಾಲಕನಾಗಿ ಕುಟುಂಬವನ್ನು ಸಾಕುತ್ತಿದ್ದಾರೆ. ಮದುವೆಯಾದ ಬಳಿಕ ಸುಖ ಸಂಸಾರ ನಡೆಸಬೇಕಿದ್ದ ಸುಧಾಕರ್ ಗೆ ಬರಸಿಡಿಲಂತೆ ಎರಗಿ ಬಂದಿರುವ ಮಗಳ ಕಾಯಿಲೆಗೆ ಹಣ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಬಲು ಅಪರೂಪದ ಕಾಯಿಲೆ Thalassemia major. ಹುಟ್ಟಿದ ಕೆಲವೇ ವಾರಗಳಲ್ಲಿ ಮುಖದ ಮೇಲೆ ವೈಟ್ ಪ್ಯಾಚಸ್ ಬಂದಿತ್ತು. ಆರೋಗ್ಯವೂ ಹದಗೆಟ್ಟಿತ್ತು. ಸ್ಥಳೀಯ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿದ ಬಳಿಕ ರೋಗ ಪತ್ತೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದರು. ಆಗ ಗೊತ್ತಾದ ಅಂಶವೆಂದರೆ ಮಗುವಿನಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕೇವಲ 5 ರಷ್ಟು ಮಾತ್ರ ಇದೆ. ಕೂಡಲೇ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಷನ್ ಮಾಡಿದರೆ ಮಗುವನ್ನು ಗುಣ ಮಾಡಬಹುದು. ಆಪರೇಷನ್ ಮಾಡುವ ತನಕ ಪ್ರತಿ 20 ದಿನಕ್ಕೆ ಒಮ್ಮೆ ರಕ್ತ ಹಾಕಿಸುತ್ತಲೇ ಇರಬೇಕು ಎನ್ನುವುದು. ಅಂದಿನಿಂದ ಆಪರೇಷನ್ ಮಾಡಿಸಲು ಹಣ ಹೊಂದಿಸುವ ಜೊತೆಗೆ 20 ದಿನಕ್ಕೊಮ್ಮೆ ರಕ್ತ ಹಾಕಿಸಲು ನಾಲ್ಕರಿಂದ ಐದು ಸಾವಿರ ವೆಚ್ಚ ಮಾಡುತ್ತ ಮಗಳನ್ನು ಉಳಿಸಿಕೊಡಿ ಎಂದು ಕಂಡ ಕಂಡವರ ಬಳಿ ಕಣ್ಣೀರು ಹಾಕುತ್ತಿದ್ದಾರೆ.

ಮಗುವಿಗಾಗಿ ಇನ್ನೊಂದು ಮಗು ಹೆತ್ತರು.!
ಇದೊಂದು ಅಚ್ಚರಿಯ ವಿಷಯವಾದರೂ ಸತ್ಯ ಸಂಗತಿ. ಮನಸ್ವಿ ರಕ್ತಕ್ಕೆ ಹೊಂದಾಣಿಕೆಯಾಗುವ ವ್ಯಕ್ತಿಯ ಬೆನ್ನಿನ ಮೂಳೆಯಿಂದ ಸ್ಟೆಮ್ ಸೆಲ್ ಬೇಕಿತ್ತು. ಹೊಂದಾಣಿಕೆ ಆಗುವ ವ್ಯಕ್ತಿಯ ಸ್ಟೆಮ್ ಸೆಲ್ ಕಸಿ ಮಾಡಿದರೆ ಬೇಗ ಗುಣಮುಖ ಆಗುವ ಜೊತೆಗೆ ಆಪರೇಷನ್ ವೆಚ್ಚವೂ ಕಡಿಮೆ ಆಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು. ಮೊದಲೇ ಹಣವಿಲ್ಲದೆ ಪರದಾಡುತ್ತಿದ್ದ ಸುಧಾಕರ್, ದೇವರ ಮೇಲೆ ಭಾರ ಹಾಕಿ ಎರಡನೇ ಮಗು ಮಾಡಿಕೊಳ್ಳಲು ಮುಂದಾದರು. ಈ ಪ್ರಕ್ರಿಯೆಯಲ್ಲೂ ಲಕ್ಷಾಂತರ ರೂಪಾಯಿ ವೆಚ್ಚವಾಯ್ತು. ದುರಾದೃಷ್ಟ ಅಂದರೆ ಎರಡನೇ ಮಗುವಿನ ರಕ್ತ ಮನಸ್ವಿ ರಕ್ತಕ್ಕೆ ಹೊಂದಾಣಿಕೆ ಆಗಲಿಲ್ಲ. ಹಾಗಾಗಿ ಮತ್ತೆ ಬೇರೆ ದಾನಿಗಳ ಹುಡುಕಲು ಮುಂದಾಗಿದ್ದರು. ಈ ನಡುವೆ ಕೊರೊನಾ ಸೋಂಕು ವ್ಯಾಪಕವಾದ ಕಾರಣ ಯಾರೊಬ್ಬರೂ ಬೆನ್ನು ಮೂಳೆಯ ಸ್ಟೆಮ್ ಸೆಲ್ಸ್ ದಾನ ಮಾಡಲು ಮುಂದೆ ಬರಲಿಲ್ಲ.
ತಲಾಸ್ ಸೆಮಿಯಾ (Thalassemia major) ಕಾಯಿಲೆ ಗುಣಮುಖ ಮಾಡಲು ಹಣವಿಲ್ಲದ ಕಾರಣ ಸುಧಾಕರ್ ನಾಲ್ಕೈದು ವರ್ಷಗಳ ಕಾಲ ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ್ದಾರೆ. ಮಗಳ ಚಿಕಿತ್ಸೆಗೆ ಯಾರೊಬ್ಬರೂ ದಾನಿಗಳು ಸಿಗದಿದ್ದಾಗ ತನ್ನದೇ ಬೆನ್ನು ಮೂಳೆ ಸ್ಟೆಮ್ ಸೆಲ್ ಕೊಡಲು ಮುಂದಾದರು. ಆದರೆ ವೆಚ್ಚ ಮಾತ್ರ ಅಗಾಧವಾಗಿತ್ತು. ನಾರಾಯಣ ಹೃದಯಾಲಯದಲ್ಲಿ ಅಂದಾಜು ವೆಚ್ಚದ ಪಟ್ಟಿ ಪಡೆದಿದ್ದರು. ಬರೋಬ್ಬರಿ 38 ಲಕ್ಷದ ಪಟ್ಟಿ ನೋಡಿ ಕಂಡಕಂಡವರನ್ನು ಧನ್ಯತೆಯಿಂದ ಬೇಡಿಕೊಂಡಿದ್ದು, ಬಳಿಕ ಸರಿ ಸುಮಾರು 18 ಲಕ್ಷದಷ್ಟು ಹಣವನ್ನು ಒಟ್ಟು ಮಾಡಿದ್ದರು. ಈಗಾಗಲೇ ನಾರಾಯಣ ಹೃದಯಾಲಯದಲ್ಲಿ ಡಾ ಸುನೀಲ್ ಭಟ್ ನೇತೃತ್ವದ ವೈದ್ಯರ ತಂಡ ಟ್ರಾನ್ಸ್ ಪ್ಲಾಂಟೇಷನ್ ಕೂಡ ಮುಗಿಸಿದೆ. ಮಗು ಮನಸ್ವಿ ಕೂಡ ಚೇತರಿಸಿಕೊಳ್ತಿದ್ದಾರೆ. ಜೊತೆಗೆ ಸಂಗ್ರಹ ಮಾಡಿದ ಹಣವೂ ಮುಕ್ತಾಯವಾಗಿದೆ. ಆದರೆ ಇದೀಗ ಮಗುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರಲು ಕನಿಷ್ಟ 10 ಲಕ್ಷವಾದರೂ ಹಣ ಹೊಂದಿಸಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ನಾನಾದರೂ ಚೆನ್ನಾಗಿದ್ದು, ಲಾಕ್ ಡೌನ್ ಇಲ್ಲದಿದ್ದರೆ ಕಾರು ಚಾಲನೆ ಮಾಡಿ ಕನಿಷ್ಟ 30 ರಿಂದ 40 ಸಾವಿರ ಹಣ ಸಂಪಾದನೆ ಮಾಡುತ್ತಿದ್ದೆ. ಆದರೆ ನಾನೇ ಬೆನ್ನು ಮೂಳೆ ಸ್ಟೆಮ್ ಸೆಲ್ಸ್ ದಾನ ಮಾಡಿದ್ದು ಆಪರೇಷನ್ ಆಗಿದೆ. ಇನ್ನು ಮುಂದೆ ಕಾರು ಚಾಲನೆಯೂ ಕಷ್ಟವಾಗಬಹುದು ಎನ್ನುತ್ತಾರೆ ಸುಧಾಕರ್.

ಬೋನ್ ಮ್ಯಾರೋ ಎನ್ನುವ ಚಿಕಿತ್ಸೆ ಕೊಟ್ಟು ತಲಾಸ್ ಸೆಮಿಯಾ ಕಾಯಿಲೆ ಗುಣ ಮಾಡಬಹುದು. ಯಾರಾದರೂ ಡೋನರ್ ಅವರ ಬೆನ್ನು ಮೂಳೆಯಿಂದ ಸ್ಟೆಮ್ಸ್ ಸೆಲ್ಸ್ ತೆಗೆದು ಕೊಡಬೇಕು. ಮಗುವಿನ ರಕ್ತಕ್ಕೆ ಸೇರಿಸಿ ಹೊಸ ರಕ್ತಕಣ ಸೃಷ್ಟಿಯಾಗುವಂತೆ ಮಾಡಬೇಕು. ಬಳಿಕ ಮಗುವಿನಲ್ಲಿ ಹೊಸ ರಕ್ತಕಣ ಸೃಷ್ಟಿಯಾಗುವಂತೆ ಚಿಕಿತ್ಸೆ ನೀಡಬೇಕು. ಪ್ಲೇಟ ಲೇಟ್ ಸಂಖ್ಯೆ ವೃದ್ಧಿಯಾದ ಬಳಿಕ ಆಸ್ಪತ್ರೆಯಿಂದ ಕಳುಹಿಸಲಾಗುತ್ತದೆ. ಇದೊಂದು ತ್ರಾಸದಾಯಕ ಚಿಕಿತ್ಸೆ ಆಗಿದ್ದು, ನಾರಾಯಣ ಹೃದಯಾಲಯದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳಿಗೆ ಈ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ನಮ್ಮ ಮನಸ್ವಿ ಕೂಡ ಗುಣಮುಖ ಆಗುತ್ತಿದ್ದಾಳೆ. ಆದರೆ ಸಹಾಯದ ಆಸರೆ ಬೇಕಿದೆ.
ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಸಹೃದಯರು ಕೈಲಾದ ಸಹಾಯ ಮಾಡಿದರೂ ಮನಸ್ವಿ ಚಿಕಿತ್ಸೆ ಸಹಾಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಗೂಗಲ್ ಪೇ ಮಾಡುವವರು ಸುಧಾಕರ್ ಮೊಬೈಲ್ ಸಂಖ್ಯೆ 9538716450 Phone pay ಸಂಖ್ಯೆ 9945422656 (ಸುಷ್ಮಿತಾ) ಹಾಗೂ ಬ್ಯಾಂಕ್ ಮೂಲಕ ಹಣ ವರ್ಗಾಯಿಸುವುದಿದ್ದರೆ ಸುಧಾಕರ್ ಅವರ ವಿಸಿ ಫಾರಂ ಬ್ರಾಂಚ್ ಅಕೌಂಟ್ ನಂಬರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ 39782356538 IFSC ಕೋಡ್ SBIN0040164 ಮೂಲಕವೂ ಸಹಾಯ ಮಾಡಬಹುದು.