ಮಂಗಳೂರು: ಉಳ್ಳಾಲದ ಅಝಾನ್ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಒಂದು ಮೀನುಗಾರಿಕೆಗೆ ತೆರಳಿದ ಸಂದರ್ಭ ಅಪಘಾತಕ್ಕೀಡಾಗಿದ್ದು, ಬೋಟ್ ನಲ್ಲಿದ್ದ ಎಲ್ಲ ಹತ್ತು ಜನ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇಂದು ಮುಂಜಾನೆ 1:30 ರ ಸುಮಾರಿಗೆ ಅಶ್ರಫ್ ಮತ್ತು ಫಾರೂಕ್ ಎಂಬವರಿಗೆ ಸೇರಿದ ಈ ಬೋಟ್ ಕಡಲ ಕಿನಾರೆ ಯಿಂದ ಮೀನುಗಾರಿಕೆಗೆ ತೆರಳಿದ್ದು, ಉಳ್ಳಾಲದ ಕೋಡಿ ಎಂಬಲ್ಲಿ ದಡದಿಂದ ಸ್ವಲ್ಪ ದೂರದಲ್ಲಿ ಅಪಘಾತಕ್ಕೀಡಾಗಿದೆ. ಈ ಬಗ್ಗೆ ಮೀನುಗಾರರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಎಲ್ಲ ಮೀನುಗಾರರನ್ನು ರಕ್ಷಿಸಿದ್ದಾರೆ.
ಕೆಲವರು ಬ್ರೇಕ್ ವಾಟರ್ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಅಳವಡಿಸಿದ ಎರಡು ರೀಫ್ ಗಳ ನಡುವಿನ ಅಂತರ ಅಪಘಾತಕ್ಕೆ ಕಾರಣ ಎಂದಿದ್ದಾರೆ. ಇನ್ನು ಕೆಲವರು ಬೋಟ್ ನಲ್ಲಿದ್ದ ಚಾಲಕರು ಮದ್ಯದ ಅಮಲಿನಲ್ಲಿದ್ದ ಕಾರಣ ಅಪಘಾತ ನಡೆದಿದೆ ಎನ್ನುತ್ತಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.