ಮಂಗಳೂರು, ಮೇ 21: ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆಯಿಂದ ಕಡ್ಡಾಯವಾಗಿ ಪಡಿತರ ವಿತರಣೆ ಪಾರಂಭಿಸಬೇಕು, ಅಲ್ಲದೆ 10 ಗಂಟೆ ನಂತರ ಕ್ಯೂ ನಲ್ಲಿ ಉಳಿದವರಿಗೂ ಪಡಿತರ ವಿತರಿಸಬೇಕು ಹಾಗೆ, ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ 7 ಗಂಟೆಯ ಮೊದಲೇ ಬಂದು ಅಂಗಡಿ ಬಾಗಿಲು ತೆರೆಯಬೇಕು, ಹಾಗೇ 7 ಗಂಟೆಯಿಂದ ಕಡ್ಡಾಯವಾಗಿ ಪಡಿತರ ವಿತರಣೆ ಪ್ರಾರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಅಥವಾ ಟೋಕನ್ ಗಳನ್ನು ನೀಡಿ ಪಡಿತರ ವಿತರಿಸಬೇಕು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೆ ಕಡ್ಡಾಯವಾಗಿ ಪಡಿತರ ವಿತರಿಸಬೇಕು. ಪಡಿತರ ವಿತರಣಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
ಜೊತೆಗೆ ಸ್ಯಾನಿಟೈಸರ್ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಆಧಾರ್ ಓಟಿಪಿ ಸೌಲಭ್ಯವನ್ನು ಒದಗಿಸಿರುವುದರಿಂದ ಯಾವುದೇ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸಬೇಕು ಮತ್ತು ಪಡಿತರ ಚೀಟಿದಾರರನ್ನು ಬಯೋ ಮೆಟ್ರಿಕ್ ಕೊಡಲು ಒತ್ತಾಯಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಪಡಿತರ ಚೀಟಿಗಳಿಗೆ ನಿಗದಿಪಡಿಸಲಾದ ಪ್ರಮಾಣದಲ್ಲಿ ಪಡಿತರ ವಿತರಣೆಯನ್ನು ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಕಡಿಮೆ ಪ್ರಮಾಣದಲ್ಲಿ ಪಡಿತರವನ್ನು ವಿತರಿಸುವಂತಿಲ್ಲ. ಪಡಿತರದಲ್ಲಿ ಬೆಳ್ತಿಗೆ ಹಾಗೂ ಕುಚ್ಚಿಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರವನ್ನು ವಿತರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಹಣ ಪಡೆಯಬಾರದು. ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.