Ad Widget .

ಸಿಎಂ ನಿವಾಸ ಜನರ ಕಷ್ಟಕ್ಕಿಲ್ಲವೇ? ಪ್ರಜೆಗಳ‌‌ ಕಣ್ಣೀರಿಗೆ ಮನ ಕರಗುವುದು ಯಾವಾಗ?

ಕುಮಾರಕೃಪಾ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ‌ ಅಧಿಕೃತ ಸರ್ಕಾರಿ ಬಂಗಲೆ. ಇಲ್ಲಿ ರಾಜ್ಯ‌ ರಾಜಕೀಯದ ಆಸ್ಥಾನ. ಇಲ್ಲಿ ಇಡೀ ರಾಜ್ಯದ‌ ಬಗ್ಗೆ ಸಮಗ್ರ ಸಮಸ್ಯೆಗಳ, ಪರಿಹಾರೋಪಯಗಳ, ವಿಚಾರಗಳ ಕುರಿತ ವಿದ್ಯಮಾನಗಳನ್ನು ಚರ್ಚೆ ನಡೆಸಲಾಗುತ್ತದೆ. ನಾಡಪ್ರಭುವಿನ ಈ ಆಸ್ಥಾನ ಪ್ರಜೆಗಳ ಕಷ್ಟಕ್ಕೆ ಮಿಡಿಯುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೊನೆಯ ಸ್ಥಳ. ಎಲ್ಲಿಯೂ ಪರಿಹಾರ ಸಿಗದಿದ್ದರೂ ಇಲ್ಲಿ ಖಂಡಿತಾ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ರಾಜ್ಯದ ಜನ ನಂಬುತ್ತಾರೆ. ಆದ್ದರಿಂದಲೇ ಹಲವು ಮಂದಿ ಇತ್ತ ಕಡೆ ಧಾವಿಸುತ್ತಾರೆ.

Ad Widget . Ad Widget .

ಆದರೆ ಈ ಕುಮಾರಕೃಪಾ ನಿವಾಸ ಇಂದು ಕಣ್ಣೆತ್ತಿ ನೋಡಲೂ ಸಿಗದ ಗಗನಕುಸುಮವಾಗಿದೆ. ರಾಜ್ಯದಲ್ಲಿ ತಾರಕಕ್ಕೆ ಏರಿರುವ ಕೊರೊನಾ ಸೋಂಕಿನ ಪರಿಣಾಮ ಹಲವು ಮಂದಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ವೆಂಟಿಲೇಟರ್ ಸಿಗದೇ, ಔಷಧಿ ಸಿಗದೇ ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಂತೂ‌ ಈ ಸಮಸ್ಯೆ ಮುಗಿಲುಮುಟ್ಟಿದ್ದು, ಹಲವು ಮಂದಿ ತಮ್ಮವರನ್ನು, ತಮ್ಮ ಆಪ್ತವರ್ಗದವರನ್ನು ಉಳಿಸಿಕೊಳ್ಳುವ ಸಲುವಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಂಗುಡಿಯಿಟ್ಟು, ಬೆಡ್, ವೆಂಟಿಲೇಟರ್ ಗಾಗಿ ಗೋಗರೆಯುತ್ತಿದ್ದಾರೆ. ಕೊನೆಗೆ ಎಲ್ಲೂ ಸರಿಯಾದ ವ್ಯವಸ್ಥೆಗಳು ಸಿಗದಾದಾಗ ಕೊನೆಯ ಪ್ರಯತ್ನವೆಂಬಂತೆ ರೋಗಿಗಳನ್ನು ಹೊತ್ತ ಅಂಬ್ಯುಲೆನ್ಸ್ ಗಳು ಸಿಎಂ ನಿವಾಸ ‘ ಕುಮಾರಕೃಪಾ’ ವನ್ನು ತಲುಪುತ್ತವೆ. ಪರಿಸ್ಥಿತಿ ಇಷ್ಟು ಹದೆಗೆಟ್ಟಾಗ ಮುಖ್ಯಮಂತ್ರಿಗಳೇ ಬಂದು ಏನೋ ಒಂದು ಪರಿಹಾರ ನೀಡಬೇಕಿತ್ತು. ಕೊನೆಯದಾಗಿ ಅರಸಿ ಬಂದವರ ಕಣ್ಣೊರೆಸಲು‌ ಸಾಂತ್ವನದ ನುಡಿಯನ್ನಾದರೂ ಬಂದು ಆಡಬೇಕಿತ್ತು. ಆದರೆ ನಮ್ಮ ಸಿಎಂ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕುಮಾರಕೃಪಾ ನಿವಾಸವನ್ನು ಸಂಪರ್ಕಿಸುವ ಅಷ್ಟೂ ರಸ್ತೆಗಳನ್ನು ಪೊಲೀಸರಿಂದ ಬಂದ್ ಮಾಡಿಸುವುದೇ.?
ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಯಿತು. ಹಲವರು ಹಲವಾರು ರೀತಿಯಲ್ಲಿ ಅಭಿವೃದ್ಧಿ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳು ಎಂದಿನಂತೆ ಸರ್ಕಾರದ, ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದರೆ ಆಡಳಿತ ಪಕ್ಷದ ಹಲವರು ಈ ನಡೆಯನ್ನು ಸಮರ್ಥಿಸಿಕೊಂಡರು. ಕೊನೆಯಲ್ಲಿ ಬೇಡಿ ಬಂದವರಿಗೆ ನ್ಯಾಯ ಕೊಡಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

Ad Widget . Ad Widget .


ರಾಜ್ಯದ ಜನ ಕೊರೊನ ಸಂಕಷ್ಟದಲ್ಲಿ ದಿಕ್ಕುತೋಚದಾದಾಗ ದಂಡನಾಯಕ ಎನಿಸಿಕೊಂಡವರು ಹೊದ್ದು ಮಲಗಿದರೆ ಜನ ಇನ್ನಾರ ಬಳಿ ಹೋಗಬೇಕು. ದಿನಕ್ಕೊಂದು ಹೊಸ ಆದೇಶ ಮಾಡುತ್ತಾ, ಲಾಕ್ ಡೌನ್, ಸೆಮಿಲಾಕ್ ಡೌನ್, ಕರ್ಪ್ಯೂ ಅಂತ ಹೇಳಿ ಪ್ರಜೆಗಳಿಂದ ವಸೂಲಿ ಮಾಡುವ ಪೊಲೀಸರು, ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಸಿಗದೇ ಆಸ್ಪತ್ರೆಗೆ ಹೋದ ವ್ಯಕ್ತಿ ಹೆಣವಾಗಿ ಮರಳಿ ಬರುವುದು, ಜೊತೆಗೆ ಲಕ್ಷಗಟ್ಟಲೆ ಬಿಲ್ ಮುಂತಾದ ಸಮಸ್ಯೆಗಳಿದ್ದಾಗ ಜನ ನಿಮ್ಮ ಬಳಿ ಬಾರದೆ ಮತ್ತೇನು ಮಾಡಬೇಕು ಮುಖ್ಯಮಂತ್ರಿಗಳೇ? ಪ್ರಜೆಗಳ ಕಷ್ಟಕ್ಕೆ ಮಿಡಿಯದೇ ನೀವು ತಣ್ಣನೆ ಎಸಿ ಕೆಳಗೆ ಕಾಲುಚಾಚಿ ಕುಳಿತುಕೊಂಡರೆ ಕಾಯುವವರಾರು? ನಿಮ್ಮಂತ ಹಿರಿಯ ರಾಜಕಾರಣಿ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಅದರ ಬದಲು ಪ್ರತಿಭಟನೆಗೆ ಹೆದರಿ ಪೊಲೀಸರಿಂದ ರಸ್ತೆ ಬಂದ್ ಮಾಡಿಸುವುದು, ಕಷ್ಟ ಕೇಳದೆ ಪಲಾಯನ ಮಾಡುವುದು‌ ನಿಮ್ಮಂಥವರಿಗೆ ಶೋಭೆ ತರುವುದೇ ಹೇಳಿ? ನಿಮ್ಮ ಬ್ಯಾರಿಕೇಡ್ ಅವಾಂತರದಿಂದ ಆ ರಸ್ತೆಯಲ್ಲಿ ಚಲಿಸುವ ಹಲವರಿಗೆ ತೊಂದರೆಯಾಗಿದೆ. ಸಾರ್ವಜನಿಕ ರಸ್ತೆಯನ್ನು ‌ಬಂದ್ ಮಾಡಿರುವ ಪೊಲೀಸರ ಕ್ರಮವೂ ಸರಿಯಲ್ಲ. ಪ್ರಜೆಗಳ‌ ನೋವಿಗೆ ನಿಮ್ಮ ಮನ ಮಿಡಿಯುವುದು ಯಾವಾಗ? ಜನರ ಸಮಸ್ಯೆಗೆ ಸ್ಪಂದಿಸದೇ ಕುಮಾರಕೃಪಾ ನಿವಾಸವನ್ನು ಬಂದ್ ಮಾಡಿರುವ ನಿಮ್ಮ ಬುದ್ದಿವಂತಿಕೆ ನಾಳೆ ವಿಧಾನಸೌಧವನ್ನೂ ಮುಚ್ಚಲಾರದು ಎಂಬ ನಂಬಿಕೆಯಾದರೂ ಎಲ್ಲಿ ಬರಬೇಕು ಅಲ್ಲವೇ.?

Leave a Comment

Your email address will not be published. Required fields are marked *