Ad Widget .

ದಲಿತ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆ: ಚಿಕ್ಕಮಗಳೂರು ಪೊಲೀಸರ ಕೃತ್ಯಕ್ಕೆ ವ್ಯಾಪಕ ಖಂಡನೆ

ಚಿಕ್ಕಮಗಳೂರು. ಮೇ.22: ಇಲ್ಲಿನ‌ ಗೋಣೀಬೀಡು ಠಾಣೆ ಪಿಎಸ್‌ಐಯೋರ್ವರು ಆರೋಪಿಯೊರ್ವನ ಮೇಲೆ ವಿನಾಕಾರಣ ತೀವ್ರ ಹಲ್ಲೆ ನಡೆಸಿ, ಮೂತ್ರ ಕುಡಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಜಿಲ್ಲೆಯ ಮೂಡಿಗೆರೆ ಬಳಿಯ ಕಿರಗುಂದದ ದಲಿತ ಯುವಕ ಕೆ.ಎಲ್.ಪುನೀತ್ ಎಂಬಾತ ಪೊಲೀಸರ ಮೇಲೆ ಆರೋಪ ನಡೆಸಿದ್ದು ಈ ಕುರಿತು ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳುವಂತೆ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Ad Widget . Ad Widget .

ಗ್ರಾಮದಿಂದ ಕಾಣೆಯಾಗಿದ್ದ ವಿವಾಹಿತ ಮಹಿಳೆಯೋರ್ವರ ಜೊತೆ ನನಗೆ ಅಕ್ರಮ ಸಂಬಂಧವಿದೆ ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಾನು ತಪ್ಪು ಮಾಡಿಲ್ಲವೆಂದು ಹೇಳಿದ್ದರಿಂದ ನನ್ನ ಮೇಲೆ ಈ ಕ್ರೂರ ಹಲ್ಲೆ ನಡೆಸಲಾಯಿತು ಎಂದು ಪುನೀತ್ ಹೇಳಿದ್ದಾರೆ.

Ad Widget . Ad Widget .

ಮೇ10ರಂದು ಗ್ರಾಮದ ಕೆಲವರು ಬಂದು ನನ್ನ ಮೇಲೆ ಹಲ್ಲೆ ನಡೆಸಲು ಮುಂದಾದಾಗ ನಾನು ಸಹಾಯಕ್ಕಾಗಿ ಪೋಲೀಸ್ ಹೆಲ್ಪ್‌ಲೈನ್ 112ಕ್ಕೆ ಕರೆ ಮಾಡಿದ್ದೆ. ನಂತರ ಸ್ಥಳಕ್ಕೆ ಬಂದ ಗೋಣೀಬೀಡು ಪಿಎಸ್‌ಐ ಅರ್ಜುನ್ ಅವರು ತನ್ನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಲ್ಲದೇ ಪೋಲೀಸ್ ಠಾಣೆಯಲ್ಲಿ ನನ್ನ ಬಟ್ಟೆ ಬಿಚ್ಚಿಸಿ ಕೈಕಾಲು ಕಟ್ಟಿ ಮೇಲಕ್ಕೆ ತೂಗುಹಾಕಿ ಪಾದ ಹಾಗೂ ಮೈಕೈಗೆ ತೀವ್ರ ಹಲ್ಲೆ ನಡೆಸಿದ್ದಾರೆ. ಮೂತ್ರ ಕುಡಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಬೆಳಗ್ಗಿನಿಂದ ರಾತ್ರಿವರೆಗೂ ಕ್ರೂರವಾಗಿ ದೌರ್ಜನ್ಯ ನಡೆಸಿ, ಮೂತ್ರ ಕುಡಿಸಿ ಜಾತಿ ನಿಂದನೆಮಾಡಿದ ಪಿಎಸ್‌ಐ ಅರ್ಜುನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕರು, ಪಶ್ಚಿಮ ವಲಯ ಐಜಿಪಿ ಹಾಗೂ ಎಸ್‌ಪಿ ಎಂ.ಹೆಚ್.ಅಕ್ಷಯ್ ಅವರಿಗೆ ದೂರು ನೀಡಿದ್ದೇನೆ ಎಂದು ಕೆ.ಎಲ್.ಪುನೀತ್ ತಿಳಿಸಿದ್ದಾರೆ.

ಈ ಕುರಿತು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು ಈ ಬಗ್ಗೆ ಪರೀಶಿಲನೆ ನಡೆಸಲು ಡಿವೈಎಸ್‌ಪಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ಅಕ್ಷಯ್ ಎಂ ಹಕಾಯ್ ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಜಿಲ್ಲಾ ದಲಿತರ ಸಂಘರ್ಷ ಸಮಿತಿ ಮುಖಂಡ ರತನ್ ಊರುಬಗೆ ಖಂಡಿಸಿದ್ದು ಪಿಎಸ್‌ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿಯವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಹಿಂದೆಯೇ ಹಲವು ದೂರುಗಳಿರುವ ಪಿಎಸ್‌ಐ ಅನ್ನು ವರ್ಗಾವಣೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಅದರಂತೆ ಪಿಎಸ್‌ಐ ಅರ್ಜುನ್‌ರವರನ್ನು ವರ್ಗಾವಣೆ ಮಾಡಲಾಗಿದೆ.
ದೌರ್ಜನ್ಯ ಎಸಗಿದ ಸಬ್ ಇನ್ಸ್‌ಪೆಕ್ಟರ್‌ರವರನ್ನು ಕೇವಲ ವರ್ಗಾವಣೆ ಮಾಡಿ ಚಿಕ್ಕಮಗಳೂರು ಜಿಲ್ಲಾ ಹಿರಿಯ ಪೊಲೀಸರು ಕ್ರಮ ಜರುಗಿಸಿದಂತೆ ಕಣ್ಣೊರೆಸುವ ತಂತ್ರ ಮಾಡಿ ಕೈತೊಳೆದು ಕೊಂಡಿದ್ದಾರೆ.

Leave a Comment

Your email address will not be published. Required fields are marked *