ಬೆಂಗಳೂರು: ಕೋವಿಡ್ ಬಂದ ನಂತರ ಹಲವು ವರ್ಗದ ಜನ ಕೆಲಸ ಕಲೆದುಕೊಂಡರೆ, ಇನ್ನೂ ಕೆಲವರು ಹೊಸ ತಾಂತ್ರಿಕತೆಯನ್ನು ಬಳಸಿಕೊಳ್ತಿದ್ದಾರೆ. ಲಾಕ್ ಡವನ್ ನಿಂದ ಸಿನಿಮಾ ಮಂದಿರಗಳು ಮುಚ್ಚಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಹೊಸ ತಂತ್ರಜ್ಞಾನ ಬಳಸಿ 2 ಸಿನಿಮಾಗಳು ಕನ್ನಡದಲ್ಲಿ ತಯಾರಾಗಿದೆ.
ದೊಡ್ಡ ದೊಡ್ಡ ಸೆಟ್, ನೂರಾರು ಕಲಾವಿದರು, ದೊಡ್ಡ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ. ಹಾಗಂತ ಪ್ರತಿಭೆ ಲಾಕ್ ಆಗುವುದಿಲ್ಲ. ಸ್ಯಾಂಡಲ್‌ವುಡ್‌ನ ಕೆಲ ನಿರ್ದೇಶಕರು ಮನೆಯೊಳಗೆ ವ್ಯಕ್ತಿಗಳು ಲಾಕ್ ಆಗಿರುವಂತಹ ಕಥೆಗಳು ಮತ್ತು ಕಡಿಮೆ ಜನ ಬಳಸಿ ಮಾಡುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೊಸ ತಾಂತ್ರಿಕತೆಯೊಂದಿಗೆ ಎರಡು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
ಹೌದು, ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡು ಇಶಾಮ್ ಖಾನ್ ಮತ್ತು ಹಸೀನ್ ಖಾನ್ ಎಂಬ ನಿರ್ದೇಶಕರಿಬ್ಬರು ‘ಇಕ್ಕಟ್’ ಎಂಬ ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ಜಯಂತ್ ಸೀಗೆ ಎಂಬ ತಂತ್ರಜ್ಞ ಕಂಪ್ಯೂಟರ್ ಸ್ಕ್ರೀನ್ ಫಾರ್ಮಾಟ್‌ನಲ್ಲಿ ‘ಲವ್ ಇನ್ ದ ಟೈಮ್ ಆಫ್ ಕೋವಿಡ್’ ಎಂಬ ಸಿನಿಮಾ ಮಾಡಿದ್ದಾರೆ.
ಜಯಂತ್ ಸೀಗೆ ನಿರ್ದೇಶನದಲ್ಲಿ ರಾಕೇಶ್ ಮಯ್ಯ ಮತ್ತು ಶ್ರುತಿ ಪ್ರಕಾಶ್ ನಟಿಸಿರುವ ಸಿನಿಮಾಗೆ ‘ಲವ್ ಇನ್ ದ ಟೈಮ್ ಆಫ್ ಕೋವಿಡ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಸಂಪೂರ್ಣ ಐಫೋನ್-11ರಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಕಂಪ್ಯೂಟರ್ ಸ್ಕ್ರೀನ್ ಮಾದರಿಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸಿನಿಮಾ ಇದಾಗಿದೆ.
‘ಈ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಲಾಕ್‌ಡೌನ್ ಅವಧಿಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕನೆಕ್ಟ್ ಆಗುತ್ತಾರೆ. ಅಂತಹ ಸಮಯದಲ್ಲಿಯಾರೂ ಎಲ್ಲಿಗೂ ಹೋಗಲು ಆಗದೇ ಇರುವುದರಿಂದ ಕಥೆ ವಿಡಿಯೋ ಕಾಲ್, ಚಾಟ್ ಬಾಕ್ಸ್‌ನಲ್ಲಿಯೇ ನಡೆಯುತ್ತದೆ. ಈ ರೀತಿ ಕಂಪ್ಯೂಟರ್ ಸ್ಕ್ರೀನ್ ಮಾದರಿಯ ಸಿನಿಮಾ ಭಾರತದಲ್ಲಿ ಮೊದಲ ಬಾರಿಗೆ ಬಂದಿರುವುದು ‘ಸೀ ಯೂ ಸೂನ್’ ಮಾತ್ರ. ಆದರೆ ಈ ಮಾದರಿಯ ಸಿನಿಮಾಗಳು ಹೆಚ್ಚಾಗಿ ಥ್ರಿಲ್ಲರ್ ಕಥೆಯನ್ನು ಹೊಂದಿವೆ. ನಮ್ಮ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಜಯಂತ್. ಈ ಚಿತ್ರದಲ್ಲಿ ಕಿರಣ್ ವಟಿ, ಅಪೂರ್ವ ಭಾರಧ್ವಾಜ್, ಶ್ರವಣ್ ನಾರಾಯಣ್ ಸೇರಿದಂತೆ ಕೆಲವರು ನಟಿಸಿದ್ದಾರೆ.