ಬೆಂಗಳೂರು: ಮೇ.21: ರಾಜ್ಯದಲ್ಲಿ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ನ ವಿಸ್ತರಿಸಿದೆ. ಮೇ 24ರವರೆಗೆ ಲಾಕ್ಡೌನ್ ಘೋಷಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಈಗ ಲಾಕ್ಡೌನ್ನ ಜೂ.7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಸಚಿವರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಎದುರು ಮತ್ತೆ 14 ದಿನಗಳ ಕಾಲ ರಾಜ್ಯಾದ್ಯಂತ ಟಫ್ ಲಾಕ್ಡೌನ್ ಮುಂದುವರೆಯಲಿದೆ ಎಂದು ಘೋಷಿಸಿದರು.
ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಲಾಕ್‌ಡೌನ್ ವಿಚಾರದಲ್ಲಿ ಕೆಲ ನಿರ್ಧಾರ ಮಾಡಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ. ಕೋವಿಡ್ ಹಳ್ಳಿಗಳಿಗೆ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಕೆಲವು ತೀರ್ಮಾನ ಮಾಡಲಾಗಿದೆ.
ಈ ಹಿಂದಿನ ಲಾಕ್‍ಡೌನ್ ಮಾರ್ಗಸೂಚಿಗಳೇ ಮುಂದುವರಿಯುತ್ತವೆ ಎಂದು ಲಾಕ್‍ಡೌನ್ ಮಾರ್ಗಸೂಚಿಗಳ ಕುರಿತು ಸಿಎಂ ಸ್ಪಷ್ಟಪಡಿಸಿದ್ದಾರೆ.
ಬೆಳಗ್ಗೆ 10 ಗಂಟೆ ನಂತರ ಸಹ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, 9 ಗಂಟೆಗೆ ಮನೆಗೆ ಸೇರಬೇಕು, 10 ಗಂಟೆ ಬಳಿಕ ಯಾರೂ ಸಂಚರಿಸಕೂಡದು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆ ಬಳಿಕ ಯಾರೇ ಓಡಾಡಿದರೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.