ಬೆಂಗಳೂರು: ಕಳೆದೊಂದು ವರ್ಷದಲ್ಲಿ ಕೊರೋನ ಹಾವಳಿಯಿಂದ ವಿಶ್ವವೇ ಕಂಗೆಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಕಠಿಣ ನಿಯಮಾವಳಿಗಳು ಹಾಗೂ ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಬಲದಿಂದ ಭಾರತ ಸೇರಿದಂತೆ ಇತರ ರಾಷ್ಟ್ರಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಜನಸಂಖ್ಯೆಯಲ್ಲಿ ಬಹುದೊಡ್ಡ ರಾಷ್ಟ್ರಗಳು ಎಂದೆನಿಸಿಕೊಂಡಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತಹಂತವಾಗಿ ನಡೆಯುತ್ತಿದೆ. ಒಂದೇ ಹಂತದಲ್ಲಿ ಇಷ್ಟು ದೊಡ್ಡ ಜನಸಂಖ್ಯೆಗೆ ವ್ಯಾಕ್ಸಿನ್ ಪೂರೈಕೆ ಕಷ್ಟವಾಗಿರುವುದರಿಂದ ಸರಕಾರ ಹಂತ ಹಂತವಾಗಿ ವ್ಯಾಕ್ಸಿನ್ ನಿರ್ವಹಣೆ ಮಾಡುತ್ತಿದೆ.
ಆದರೆ ಭ್ರಷ್ಟಾಚಾರದ ಕರಿನೆರಳು ವ್ಯಾಕ್ಸಿನೇಷನ್ ಗೂ ತಟ್ಟಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಇಲಾಖೆ ಸಿಬ್ಬಂದಿಗಳು ಅಕ್ರಮವಾಗಿ ಕೋವಿಡ್ ವ್ಯಾಕ್ಸಿನ್ ಮಾರಾಟ ಆರೋಪದ ಮೋಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಓರ್ವ ವೈದ್ಯೆ ಸೇರಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಡಾ. ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಬಂಧಿತ ಆರೋಪಿಗಳು. ಈ ಪೈಕಿ ವೈದ್ಯೆ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು.
ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ, ವೈದ್ಯೆಯೊಂದಿಗೆ ಸೇರಿ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿ, ಜನರಿಂದ ಹಣ ಪಡೆಯುವ ಮೂಲಕ ಅಕ್ರಮವಾಗಿ ಲಸಿಕೆಯನ್ನು ವಿತರಿಸುತ್ತಿದ್ದರು.
ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದ ಪೊಲೀಸರು ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಮುಖ್ಯ ಕೇಂದ್ರದಿಂದ ಕಳುಹಿಸಿದ ಲಸಿಕೆಗಳು ಆಸ್ಪತ್ರೆಗಳಿಗೆ ತಲುಪುತ್ತಿಲ್ಲ. ಕಳ್ಳ ದಂಧೆಯಲ್ಲಿ ಲಸಿಕೆ ಮಾರಾಟವಾಗುತ್ತಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಈ ದಂಧೆಯಲ್ಲಿ ಮತ್ತಷ್ಟು ವೈದ್ಯರು ತೊಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.